ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳ ಇಟ್ಟಿಗೆ, ಮಣ್ಣಿನ ಮಾದರಿ ಸಂಗ್ರಹಿಸಿದ ಇನ್‌ಟ್ಯಾಕ್

INTAC collects brick, soil samples from Devaraja Market, Lansdowne buildings
Published on

ಮೈಸೂರು: ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ನಗರದ ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ಮಂಗಳವಾರ ನವದೆಹಲಿಯ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇನ್‌ಟ್ಯಾಕ್) ಸಂಸ್ಥೆ ಸದಸ್ಯರು ಪರಿಶೀಲಿಸಿ ಕಟ್ಟಡದ ಮಾದರಿಯನ್ನು ಸಂಗ್ರಹಿಸಿದರು.

ಈ ಎರಡು ಕಟ್ಟಡಗಳ ವಸ್ತುಸ್ಥಿತಿ ಕುರಿತು ವರದಿ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇನ್‌ಟ್ಯಾಕ್ ಸಂಸ್ಥೆಯ ರಘುನಾಥ್ ನೇತೃತ್ವದ ತಂಡವು ಕಟ್ಟಡದ ಇಟ್ಟಿಗೆ, ಮಣ್ಣಿನ ಮಾದರಿ, ಸುಣ್ಣದ ಗಾರೆಯಿಂದ ನಿರ್ಮಿಸಿರುವ ಕೆಲವು ಮಣ್ಣಿನ ಬಿಡಿಭಾಗ ಸಂಗ್ರಹಿಸಿದೆ. ಕಟ್ಟಡದ ತಳಪಾಯ ಸದೃಢವಾಗಿದೆಯೇ ಎಂದು ಪರಿಶೀಲಿಸಿ 5 ಅಡಿ ಆಳದ ಗುಂಡಿ ತೋಡಿ ಸಮಗ್ರವಾಗಿ ಪರಿಶೀಲನೆ ನಡೆಸಿತು. ಈ ತಂಡ ಜೂ.12 ರಂದು ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳಿಗೆ ಭೇಟಿ ನೀಡಿ ಕಟ್ಟಡದ ಗೋಡೆ, ನೆಲಹಾಸು, ಮೆಟ್ಟಿಲು, ತಾರಸಿಯ ವಿಡಿಯೊ ಮಾಡಿಕೊಂಡಿತ್ತು.

ಈ ಎರಡು ಕಟ್ಟಡಗಳ ವಸ್ತುಸ್ಥಿತಿಯ ಕುರಿತು ವರದಿಯನ್ನು ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಸಂಸ್ಥೆಯು ನೀಡಲಿದೆ. ಅಲ್ಲದೆ, ಭಾರತೀಯ ಪುರಾತತ್ವ ಇಲಾಖೆಯ ತಜ್ಞರ ತಂಡ ಸಹ ಪರಶೀಲನೆ ನಡೆಸಿ ವರದಿ ನೀಡಲಿದೆ. ಎರಡೂ ವರದಿ ಆಧರಿಸಿ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಲಿದೆ.

ಹಿನ್ನೆಲೆ: ಶತಮಾನದ ಇತಿಹಾಸ ಹೊಂದಿರುವ ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳು ಸಂಪೂರ್ಣ ದುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಕುರಿತು ನಗರದ ಗೌರಿಸತ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆಯದೆ ಅಧಿಕಾರಿಗಳು ಹಾಗೂ ಸಿವಿಲ್ ಇಂಜಿನಿಯರ್‌ಗಳ ಅಭಿಪ್ರಾಯವನ್ನು ಮಾತ್ರ ಪಡೆದು ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ನಿರ್ಧರಿಸಿರುವ ಕ್ರಮ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಅವರು ಸುಪ್ರೀಂಕೋರ್ಟ್‌ನಲ್ಲಿ ಗಮನ ಸೆಳೆದಿದ್ದರು.

ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾಗಿರುವ ಪ್ರೊ.ಎನ್.ಎಸ್. ರಂಗರಾಜು ಹಾಗೂ ಇತರರು ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಅಂಶವನ್ನು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ. ತಜ್ಞರ ಅಭಿಪ್ರಾಯವನ್ನು ಪರಿಗಣಿಸದೆ ಕಟ್ಟಡ ಕೆಡವಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿ ಇಲ್ಲ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಗೌರಿಸತ್ಯ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೂರಕವಾಗಿ ಪ್ರೊ.ಎನ್.ಎಸ್. ರಂಗರಾಜು ಅವರು ಕಟ್ಟಡದ ಕುರಿತು ನೀಡಿರುವ ಅಭಿಪ್ರಾಯವನ್ನು ಸಹ ನ್ಯಾಯಲಯದ ಗಮನಕ್ಕೆ ತರಲಾಯಿತು. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಮತ್ತು ನ್ಯಾಷನಲ್ ಟ್ರಸ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ (ಇನ್‌ಟ್ಯಾಕ್)ನ ಅಭಿಪ್ರಾಯ ಪಡೆಯಲು ಈ ಸಂಸ್ಥೆಗಳನ್ನು ಪಾರ್ಟಿ ಮಾಡುವಂತೆ 4 ಡಿಸೆಂಬರ್ 2024 ರಂದು ಆದೇಶ ನೀಡಿತ್ತು.

ದಶಕದಿಂದ ಸಂರಕ್ಷಣೆ ಕಾಣದ ಕಟ್ಟಡ: ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಗೆ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಸಂರಕ್ಷಣೆ ಮಾಡುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net