

ಚನ್ನರಾಯಪಟ್ಟಣ: ಹಲವು ಖಾಸಗಿ ವಿಮಾ ಕಂಪನಿಗಳ ಪೈಪೋಟಿಗಳ ನಡುವೆಯೂ ಮುಂಚೂಣಿ ವ್ಯವಹಾರದ ಮೂಲಕ ಭಾರತೀಯ ಜೀವ ವಿಮಾ ನಿಗಮವೂ ವಿಮಾ ರಂಗದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದೆ ಎಂದು ಚನ್ನರಾಯಪಟ್ಟಣ ಜೀವ ವಿಮಾನ ನಿಗಮದ ಶಾಖಾಧಿಕಾರಿ ಸಿ.ಜೆ. ರಾಘವೇಂದ್ರ ತಿಳಿಸಿದರು.
ಪಟ್ಟಣದಲ್ಲಿ 68ನೇ ವಿಮಾ ಸಪ್ತಾಹದ ಅಂಗವಾಗಿ ಪಟ್ಟಣದ ಜೀವ ವಿಮಾ ಶಾಖಾ ಕಚೇರಿ ವತಿಯಿಂದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಹಮ್ಮಿಕೊಂಡಿದ್ದ ಬೈಕ್ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿಯ ಕೊಡುಗೆ ಅಪಾರವಾಗಿದೆ. ವಿಶ್ವಾಸಾರ್ಹತೆಯುಳ್ಳ ಸಂಸ್ಥೆಯಾಗಿದ್ದು, ದೇಶದ ಎಲ್ಲ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಕೂಡ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದರು.
ನಮ್ಮ ವಿಮಾ ಪ್ರತಿನಿಧಿಗಳು ಕೂಡ ಸೈನಿಕರಂತೆ ಕೆಲಸ ನಿರ್ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಏಳು ದಿನಗಳ ಕಾಲ ವಿಮಾ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, 68 ವಸಂತಗಳನ್ನು ತುಂಬಿರುವ ಎಲ್‌ಐಸಿ ಜತೆಗೆ ವಿಮಾ ಪ್ರತಿನಿಧಿಗಳ ಒಕ್ಕೂಟಕ್ಕೂ ಸಹ 60 ವಸಂತ ತುಂಬಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಮೈಸೂರು ವಿಭಾಗೀಯ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ವಿ.ಜಿ.ಅಶೋಕ್ ಮಾತನಾಡಿ, ಎಲ್‌ಐಸಿಯಲ್ಲಿ ದೇಶದಾದ್ಯಂತ 14 ಲಕ್ಷ ಪ್ರತಿನಿಧಿಗಳಿದ್ದು, ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಬೈಕ್ ಜಾಥಾ: ಪಟ್ಟಣದ ಎಲ್‌ಐಸಿ ಶಾಖಾ ಕಚೇರಿಯಿಂದ ಹೊರಟ ಬೈಕ್ ಜಾಥಾ ಧನಲಕ್ಷ್ಮಿ ಚಿತ್ರಮಂದಿರ, ಮೈಸೂರು ರಸ್ತೆ, ಹಾಗೂ ಎಪಿಎಂಸಿ ತಲುಪಿ ನಂತರ ಕೆ.ಆರ್. ವೃತ್ತ ತಲುಪಿ ನವೋದಯ ವೃತ್ತದ ಮೂಲಕ ಶಾಖಾ ಕಚೇರಿ ಬಳಿ ಮುಕ್ತಾಯ ಕಂಡಿತು. ಬಳಿಕ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಬಿ.ಎಸ್.ಜಗದೀಶ್, ಎಸ್.ಪಿ. ಕುಮಾರ್, ಬಿ.ಟಿ.ರಘು, ಆರ್.ಎಸ್ ಪ್ರಸಾದ್, ಕೆ.ಟಿ.ಪ್ರಮೋದ್ ಕುಮಾರ, ಎಲ್.ಕೆ.ಪ್ರಕಾಶ್, ಚೇತನ್, ಪ್ರವೀಣ್ ಕುಮಾರ್ ಅವರನ್ನು ಗೌರವಿಸಲಾಯಿತು. ಇದೇ ವೇಳೆ ವಿಮಾ ಪ್ರತಿನಿಧಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪ ಶಾಖಾಧಿಕಾರಿ ವಿ.ಸೋಮೇಶ್, ಚನ್ನರಾಯಪಟ್ಟಣ ನಿಮ್ಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಕೆ.ಆರ್.ವಾಸುದೇವ, ಉಪಾಧ್ಯಕ್ಷ ಜಿ.ರಾಮಕೃಷ್ಣೇಗೌಡ, ಕಾರ್ಯದರ್ಶಿ ಎ.ಬಿ.ರುದ್ರೇಶ್, ಖಜಾಂಚಿ ಅರುಣ್ ಕುಮಾರ್ ಮತ್ತಿತರರಿದ್ದರು.