ಸಫಾರಿಗೆ ತೆರಳುವವರಿಗೆ ವಿಮೆ ಸೌಲಭ್ಯ

7-GPT-2
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿಗೆ ಹೋಗುತ್ತಿರುವ ಪ್ರವಾಸಿಗರು.
Published on

ಗುಂಡ್ಲುಪೇಟೆ : ಹಲವಾರು ಕ್ರಾಂತಿಕಾರಕ ಕ್ರಮಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಂಡೀಪುರದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಒಂದು ಕೋಟಿ ರೂ. ವಿಮೆ ಸೌಲಭ್ಯ ನೀಡಲಾರಂಭಿಸಿದೆ.

ಅರಣ್ಯ ಇಲಾಖೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ವಿಮಾ ಯೋಜನೆ ಶನಿವಾರದಿಂದಲೇ ಚಾಲ್ತಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಸಫಾರಿ ವಾಹನಗಳ ಮೇಲೆ ವನ್ಯಜೀವಿಗಳು ದಾಳಿ ನಡೆಸಲು ಮುಂದಾಗುತ್ತಿರುವ ಪ್ರಕರಣಗಳು ಸಂಭವಿಸುತ್ತಿವೆ. ಮರಿಗಳೊಂದಿಗೆ ಸಂಚರಿಸುವ ಆನೆಗಳು ಸಫಾರಿ ವಾಹನಗಳ ಮೇಲೆರಗುತ್ತಿದ್ದು, ಪ್ರವಾಸಿಗರಿಗೆ ಆತಂಕ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ಶುಲ್ಕ ಇಲ್ಲದೆ ವಿಮೆ ಸುರಕ್ಷತೆ ನೀಡಲು ಮುಂದಾಗಿದೆ. ಈ ಯೋಜನೆಯಲ್ಲಿ ಪ್ರವಾಸಿಗರಿಗೆ ಸಂಭವಿಸಬಹುದಾದ ಯಾವುದೇ ಅಪಾಯ, ಅಹಿತಕರ ಘಟನೆಗಳಿಗೆ ಒಂದು ಕೋಟಿ ರೂ. ರಿಸ್ಕ್ ಕವರ್ ನೀಡಲಾಗುತ್ತದೆ.

ಹುಲಿ, ಚಿರತೆ, ಆನೆಗಳ ಬೀಡು: ಇತ್ತೀಚಿನ ಗಣತಿಗಳಲ್ಲಿ ಬಂಡೀಪುರವು ಹೆಚ್ಚಿನ ಸಂಖ್ಯೆಯಲ್ಲಿ ಹುಲಿ, ಚಿರತೆ ಹಾಗೂ ಆನೆಗಳನ್ನು ಹೊಂದಿದೆ. ಉದ್ಯಾನ ನಿರ್ವಹಣೆಯಲ್ಲಿ ಸತತ ಎರಡನೇ ಬಾರಿಯೂ ಎರಡನೇ ರ‌್ಯಾಂಕ್ ಕಾಪಾಡಿಕೊಂಡಿದೆ.
ಬಂಡೀಪುರ ಯುವಮಿತ್ರ ಯೋಜನೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ ಮೂಲಕ ಪರಿಸರ ಶಿಕ್ಷಣ ನೀಡುತ್ತಿದೆ. ಇದೇ ವರ್ಷ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಿದ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಪ್ರತಿ ವರ್ಷವೂ 1.4 ರಿಂದ 1.5 ಲಕ್ಷದಷ್ಟು ಪ್ರವಾಸಿಗರು ಸಫಾರಿಗೆ ಆಗಮಿಸುತ್ತಿದ್ದಾರೆ.

ಜವಾಬ್ದಾರಿಯುತ ಪ್ರವಾಸೋದ್ಯಮ ನಡೆಸಲು ಅರಣ್ಯ ಇಲಾಖೆ ಮುಂದಾಗಿದ್ದು, ಶನಿವಾರದಿಂದ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಒಂದು ಕೋಟಿ ರೂ. ವಿಮೆ ಸೌಲಭ್ಯ ನೀಡಲಾಗುತ್ತಿದೆ. ಕೊಠಡಿಗಳನ್ನು ಮುಂಗಡ ಕಾಯ್ದಿರಿಸಿದ ಪ್ರವಾಸಿಗರು ಸಫಾರಿಗೆ ಹೋಗಲು ಕೌಂಟರಿನಲ್ಲಿ ಟಿಕೆಟ್ ಖರೀದಿಸಿದ ಕೂಡಲೇ ಅವರಿಗೆ ಹೆಚ್ಚುವರಿ ಶುಲ್ಕ ಇಲ್ಲದೆ ಒಂದು ಕೋಟಿ ರೂ. ವಿಮೆ ಸುರಕ್ಷತೆ ದೊರಕಲಿದೆ.
ಡಾ.ರಮೇಶ್‌ಕುಮಾರ್ ಹುಲಿ ಯೋಜನೆ ನಿರ್ದೇಶಕ ಬಂಡೀಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net