

ಶಿವಮೊಗ್ಗ: ಎನ್‌ಎಚ್‌ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ವಿಮಾ ಸೌಲಭ್ಯ ಒದಗಿಸಲು ಮುಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಕರ್ತವ್ಯದ ಸಂದರ್ಭ ಅಥವಾ ಕರ್ತವ್ಯ ಮುಗಿದ ನಂತರ ಅಪಘಾತ ಸಂಭವಿಸಿ ಮೃತಪಟ್ಟ ನೌಕರರ ಕುಟುಂಬಕ್ಕೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರಿಗೆ 60 ಲಕ್ಷ ರೂ., ಸ್ವಲ್ಪ ಪ್ರಮಾಣದ ಅಂಗವೈಕಲ್ಯಕ್ಕೆ ಶೇ.75ರಷ್ಟು ಪರಿಹಾರ ನೀಡಲಾಗುವುದು. ಉದ್ಯೋಗಿಗಳ 18ರಿಂದ 22 ವರ್ಷದೊಳಗಿನ ಮಕ್ಕಳ ಶಿಕ್ಷಣಕ್ಕಾಗಿ 4ರಿಂದ 8 ಲಕ್ಷ ರೂ. ನೀಡಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೇರ ಗುತ್ತಿಗೆ ಉದ್ಯೋಗಿಗಳ ಸಾಮಾಜಿಕ ಭದ್ರತೆಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿತ್ತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಖಾಸಗಿ ಬ್ಯಾಂಕ್ ಜತೆಗೆ ವಿಮಾ ಸೌಲಭ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೊದಲ ವೇತನ ಜಮೆಯಾದ 15 ದಿನಗಳ ನಂತರ ವಿಮಾ ಸೌಲಭ್ಯ ಜಾರಿಗೆ ಬರಲಿದೆ. ಈ ಯೋಜನೆಯಿಂದ 28,400 ಅನುಮೋದಿತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 25 ಸಾವಿರ ನೇರ ಗುತ್ತಿಗೆ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.
ಹಿರಣ್ಣಯ್ಯ, ಧೀರರಾಜ್ ಹೊನ್ನವಿಲೆ, ಕೃಷ್ಣಪ್ಪ, ಲಕ್ಷ್ಮಣಪ್ಪ, ನೇರ ಗುತ್ತಿಗೆ ಉದ್ಯೋಗಿಗಳ ಸಂಘದ ಜಿಲ್ಲಾಧ್ಯಕ್ಷ ಶಂಕರ್ ಹರಗವಾಡಿ, ಕಾರ್ಯದರ್ಶಿ ಕಿರಣ್ ಇದ್ದರು.