ನಗರ-ಗ್ರಾಮೀಣ ಪ್ರದೇಶಗಳ ನಡುವೆ ವಿಮಾ ಸಾಂದ್ರತೆ ಅಂತರ ಹೆಚ್ಚಳ

jss
Published on

ಮೈಸೂರು : ಗ್ರಾಮೀಣ ಮತ್ತು ಉಪನಗರ ಪ್ರದೇಶಗಳಲ್ಲಿ ವಿಮಾ ವ್ಯಾಪ್ತಿ ಹೆಚ್ಚಿಸುವ ಅಗತ್ಯವಿದೆ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಎನ್. ನಾಗರಾಜ ಅಭಿಪ್ರಾಯಪಟ್ಟರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ‘ಭಾರತದಲ್ಲಿ ವಿಮಾ ತೀವ್ರತೆ ಮತ್ತು ಸಾಂದ್ರತೆಯ ವಿಸ್ತರಣೆ ವಿಮಾ ಕ್ಷೇತ್ರದ ಪಾತ್ರ’ ವಿಷಯದ ಕುರಿತು ಅಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವಿಮಾ ಸಾಂದ್ರತೆಯ ನಡುವೆ ಬಹಳ ಅಂತರವನ್ನು ನಾವು ಕಾಣುತ್ತಿದ್ದೇವೆ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ನೀತಿ ರೂಪಿಸುವ ವಲಯಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಇಂತಹ ಗಂಭೀರ ವಿಷಯವನ್ನು ಆಯ್ಕೆ ಮಾಡಿಕೊಂಡು ಪರಸ್ಪರ ಚರ್ಚೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ವಿಭಾಗದ ಜಂಟಿ ನಿರ್ದೇಶಕ ಪ್ರೊ.ಬಿ. ಚಂದ್ರಶೇಖರ್ ಮಾತನಾಡಿ, ಯುವಜನರಲ್ಲಿ ಹಣಕಾಸು ಸಾಕ್ಷರತೆಯ ಅವಶ್ಯಕತೆಯಿದೆ.ವಿದ್ಯಾರ್ಥಿಗಳು ವಿಮಾ ಕ್ಷೇತ್ರದಲ್ಲಿ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳು ನೀತಿ ಸಂವಾದಕ್ಕಾಗಿ ವೇದಿಕೆ ಒದಗಿಸಬೇಕು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಶೋಧನೆಗೆ ಉತ್ತೇಜನೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಂ. ಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net