

ಶಿವಮೊಗ್ಗ: ಜಿಲ್ಲೆಯಲ್ಲಿ ಬೆಳೆ ಹಾನಿಗೆ 34.50 ಕೋಟಿ ರೂ. ವಿಮಾ ಪರಿಹಾರ ಬಿಡುಗಡೆಯಾಗಿದ್ದು, ಇನ್ನೊಂದು ವಾರದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿ ನೀಡಿದ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್ಕುಮಾರ್ , ಮುಂಗಾರು ಹಂಗಾಮಿನಲ್ಲಿ 3,796 ಹೆಕ್ಟೇರ್ನಲ್ಲಿ ಬೆಳೆ ಹಾನಿ ಸಂಭವಿಸಿದ್ದು, 8,950 ರೈತರಿಗೆ ಒಟ್ಟು 8.56 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ತಿಳಿಸಿದರು.
ಮುಂಗಾರಿನಲ್ಲಿ 234 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿದೆ. ಕಳೆದ ವರ್ಷಕ್ಕೆ ಸಂಬಂಧಿಸಿದಂತೆ 21,414 ರೈತರಿಗೆ 25.94ಕೋಟಿ ರೂ. ಬೆಳೆ ವಿಮೆ ಪರಿಹಾರ ಪಾವತಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ ತಿಳಿಸಿದರು.
ಪಡಿತರ ಮನೆಗೆ ತಲುಪಿಸಿ: ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ 108 ದಿನಗಳ ಅವಧಿಯ ಅಕ್ಷರ ದಾಸೋಹ ಪಡಿತರವನ್ನು ವಿದ್ಯಾರ್ಥಿಗಳ ಮನೆಗೆ ತಲುಪಿಸುವಂತೆ ಡಿಡಿಪಿಐ ಎನ್.ಎಂ.ರಮೇಶ್ಗೆ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಸೂಚಿಸಿದರು.
ಕರೊನಾ ಕಾರಣದಿಂದ ಶಾಲೆಗಳು ನಡೆಯದ ಕಾರಣ ಇದುವರೆಗೆ 53 ದಿನಗಳ ಅವಧಿಯ ಬಿಸಿಯೂಟ ಪಡಿತರ ಸರಬರಾಜಾಗಿದೆ. ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಡಿಡಿಪಿಐ ಸಭೆಗೆ ಮಾಹಿತಿ ನೀಡಿದರು.
ಪ್ರೌಢಶಾಲೆ ಆರಂಭಿಸುವ ಕುರಿತು ವಿವಿಧ ಹಂತಗಳಲ್ಲಿ ಚರ್ಚೆ ನಡೆದಿದೆ. ಡಿಸೆಂಬರ್ನಿಂದ ತರಗತಿಗಳು ಆರಂಭವಾಗುವ ಸಾಧ್ಯತೆಯಿದೆ. ಸರ್ಕಾರ ಈ ಕುರಿತು ಮಾರ್ಗಸೂಚಿ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶೇ.98ರಷ್ಟು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದಿದೆ. ಪಠ್ಯಪುಸ್ತಕವನ್ನೂ ಪೂರೈಸಲಾಗಿದೆ ಎಂದು ಹೇಳಿದರು.
ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರಭದ್ರಪ್ಪ ಪೂಜಾರ್, ಸುರೇಶ್ ಸ್ವಾಮಿರಾವ್, ರೇಣುಕಾ ಹನುಮಂತಪ್ಪ, ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.