ವಿಮಾ ಕಂಪನಿಯಿಂದ ಸೇವಾನ್ಯೂನತೆ, ಪರಿಹಾರಕ್ಕೆ ಆದೇಶ

Consumar court
Published on

ಶಿವಮೊಗ್ಗ: ನಾಲ್ಕು ಚಕ್ರದ ವಾಹನದ ವಿಮೆ ಸಂಬಂಧ ಸೇವಾ ನ್ಯೂನತೆವೆಸಗಿದ ಕಾರಣಕ್ಕೆ ವಾಹನದ ಐಡಿವಿ ಮೊತ್ತ 5 ಲಕ್ಷ ರೂ.ಗಳನ್ನು ಶೇ.9ರ ಬಡ್ಡಿಯೊಂದಿಗೆ ಮಾಲೀಕರಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ.

ಶಿವಮೊಗ್ಗದ ಇರ್ಶಾದ್ ಎಂಬುವರು ಯುನಿಟೆಡ್ ಇಂಡಿಯಾ ವಿಮಾ ಕಂಪನಿ ಲಿ.ನ ವ್ಯವಸ್ಥಾಪಕರ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇರ್ಶಾದ್ ಅವರು ನಾಲ್ಕು ಚಕ್ರದ ವಾಹನ ಖರೀದಿಸಿ ವಿಮೆ ಮಾಡಿಸಿದ್ದರು. ಪಾಲಿಸಿಯು 2023ರ ಆ.23ರಿಂದ ರಿಂದ 2024ರ ಜೂ.12ರವರೆಗೆ ಚಾಲ್ತಿಯಲ್ಲಿತ್ತು. ಆದರೆ 2023ರ ಸೆ.25ರಂದು ವಾಹನ ಚಲಿಸುವಾಗ ಬಾನೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಹಾಳಾಗಿತ್ತು. ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ವಾಹನದ ಬೆಲೆ 9,74,378 ರೂ.ಗಳಾಗಿದೆ ಎಂದು ಇರ್ಶಾದ್ ಅವರು ವಿಮಾ ಸಂಸ್ಥೆಗೆ ಎಲ್ಲ ದಾಖಖಾತಿ ಸಲ್ಲಿಸಿ ವಿಮೆ ಪರಿಹಾರ ಪಾವತಿಗೆ ಮನವಿ ಮಾಡಿದ್ದರು. ಆದರೆ ಪರಿಹಾರ ನೀಡಲು ವಿಮಾ ಕಂಪನಿ ನಿರಾಕರಿಸಿತ್ತು.

ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಆಯೋಗದ ಅಧ್ಯಕ್ಷ ಡಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ, ಸಾಕ್ಷ ಪ್ರಮಾಣಪತ್ರ, ದಾಖಲೆ ಪರಿಶೀಲಿಸಿ ವಾದ-ವಿವಾದ ಆಲಿಸಿತ್ತು. ಈ ವೇಳೆ ವಿಮಾ ಕಂಪನಿ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿತ್ತು. ಅಲ್ಲದೆ, ಆದೇಶವಾದ ದಿನದಿಂದ ಒಂದೂವರೆ ತಿಂಗಳೊಳಗೆ ವಾಹನದ ಐಡಿವಿ ಮೊತ್ತವನ್ನು ಶೇ.9ರ ಬಡ್ಡಿಯೊಂದಿಗೆ 2024ರ ಜು.27ರಿಂದ ಪಾವತಿಸಬೇಕೆಂದು ಆದೇಶಿಸಿದೆ. ತಪ್ಪಿದಲ್ಲಿ ಆ ಮೊತ್ತಕ್ಕೆ ಶೇ.12ರಂತೆ ಬಡ್ಡಿ ಸೇರಿಸಿ ಪಾವತಿಸಬೇಕು. 25 ಸಾವಿರ ರೂ.ಗಳನ್ನು ಮಾನಸಿಕ ಹಿಂಸೆ ಮತ್ತು 10 ಸಾವಿರ ರೂ.ಅನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕು. ತಪ್ಪಿದಲ್ಲಿ ಈ ಮೊತ್ತಗಳಿಗೆ ಶೇ.12ರಂತೆ ಬಡ್ಡಿ ಸೇರಿಸಿ ನೀಡಬೇಕೆಂದು ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net