

ಅರಸೀಕೆರೆ: ಬೆಳೆ ವಿಮಾ ಮೊತ್ತ ಪಾವತಿ ಮಾಡಿರುವ ರೈತರಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ವಿಮಾ ಕಂಪನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮುಂಗಾರು, ಹಿಂಗಾರು ಅವಧಿಯಲ್ಲಿ ಅನ್ನದಾತರಿಂದ ವಿಮಾ ಮೊತ್ತ ಪಡೆದುಕೊಳ್ಳುವ ಕಂಪನಿಗಳು ಆನಂತರ ನಾಪತ್ತೆಯಾಗುತ್ತಿವೆ. ಹಣ ತುಂಬಿಸಿಕೊಳ್ಳಲು ತೋರುವ ಆತುರವನ್ನು ಪರಿಹಾರ ಕೊಡಲು ಏಕೆ ತೋರುತ್ತಿಲ್ಲ. ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್ ಉತ್ತರಿಸಿ, ಯಾವ ಕಂಪನಿಗಳಿಗೆ ವಿಮೆ ಹಣವನ್ನು ಹಾಕಲಾಗಿದೆ ಎನ್ನುವುದು ರೈತರಿಗೆ ಗೊತ್ತಿದೆ. ಬೆಳೆ ನಷ್ಟವಾದಲ್ಲಿ ಪರಿಹಾರ ಬಂದಿರುವ ಕುರಿತು ಮಾಹಿತಿ ಪಡೆದು ಸಭೆಯಲ್ಲಿ ಪ್ರಸ್ತಾಪವಾದ ವಿಷಯವನ್ನು ತಿಳಿಸಲಾಗುವುದು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ.50ಕ್ಕೂ ಹೆಚ್ಚಿನ ಮಳೆಯಾಗಿದ್ದು ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡಿರುವ ಅರಣ್ಯ ಭೂಮಿಯನ್ನು ಸರ್ಕಾರದ ಸೂಚನೆ ಬರುವವರೆಗೂ ವಶಕ್ಕೆ ಪಡೆಯಬಾರದು. ಮೀನುಗಾರಿಕೆ ಇಲಾಖೆಗೆ ಮಂಜೂರಾಗಿರುವ 30 ಮನೆಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ, ಶಿಕ್ಷಣ, ಅಬಕಾರಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ತಾಪಂ ಇಒ ನಾಗರಾಜ್, ಡಿವೈಎಸ್ಪಿ ಲೋಕೇಶ್, ಪೌರಯುಕ್ತ ಕೃಷ್ಣಮೂರ್ತಿ ಇದ್ದರು.