ಸಿಎಂ ವಿರುದ್ಧ ಅವಹೇಳನ, ಕಠಿಣ ಕ್ರಮಕ್ಕೆ ಆಗ್ರಹ

11 mlv 3
ಕುರುಬ ಸಮಾಜ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ಸಮುದಾಯದ ಮುಖಂಡರು ಭೇಟಿ ನೀಡಿ ಸಿಪಿಐ ಮಹೇಶ್ ಅವರಿಗೆ ದೂರು ಸಲ್ಲಿಸಿದರು.
Published on

ಮಳವಳ್ಳಿ: ಕುರುಬ ಸಮಾಜ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಕುರುಬ ಸಮಾಜದ ಮುಖಂಡರು ಸೋಮವಾರ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು.

ಆ.8ರಂದು ಮಂಡ್ಯ ತಾಲೂಕಿನ ಬೆನ್ನಟ್ಟಿ ಗ್ರಾಮದ ಕುಮಾರ ಹಾಗೂ ಮಹೇಶ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಕುರುಬ ಸಮಾಜದ ಬಗ್ಗೆ ಅವಾಚ್ಯ ಹಾಗೂ ಅವಹೇಳನಕಾರಿ ಪದ ಬಳಕೆ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ನಿಮ್ಮದೇ ಸರ್ಕಾರವಿದ್ದು, ತಾಕತ್ತಿದ್ದರೆ ನಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿರುವುದು ಸಮಾಜದಲ್ಲಿ ಸೌಹಾರ್ದತೆ ಕದಡುವ ಹುನ್ನಾರವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇಂತಹ ವರ್ತನೆ ಮೂಲಕ ಜಿಲ್ಲೆಯ ಸಾಮರಸ್ಯ ಹಾಳು ಮಾಡಲು ಮುಂದಾಗಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗ್ರಾಮಾಂತರ ಠಾಣೆ ಸಿಪಿಐ ಮಹೇಶ್ ಅವರಿಗೆ ದೂರು ಸಲ್ಲಿಸಿದರು.

ಪ್ರದೇಶ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಪುಟ್ಟಬಸವಯ್ಯ, ತಾಲೂಕು ಸಂಘದ ಅಧ್ಯಕ್ಷ ನಾಗರಾಜು, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಮಹದೇವು, ಯುವ ಕಾಂಗ್ರೆಸ್ ಕಿರುಗಾವಲು ಹೋಬಳಿ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಚೆನ್ನಪಿಳ್ಳೆ ಕೊಪ್ಪಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡಯ್ಯ, ಪುರಸಭಾ ಸದಸ್ಯ ಆನಂದ್ ಕುಮಾರ್, ಗ್ರಾ ಪಂ ಸದಸ್ಯ ಗುರುಪ್ರಸಾದ್, ಮುಖಂಡರಾದ ಕಲ್ಲಾರೆಪುರ ಮಂಜುನಾಥ್, ಲಿಂಗರಾಜು, ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net