

ಮೈಸೂರು: ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಲ್ಟಿ ಪ್ಲೆಕ್ಸ್ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ಬಿತ್ತರವಾಗುವ ರಾಷ್ಟ್ರಗೀತೆಗೆ ದಂಪತಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕೆಲ ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಚಲನಚಿತ್ರ ವೀಕ್ಷಣೆಗಾಗಿ ದಂಪತಿ ಇಲ್ಲಿಗೆ ಬಂದಿದ್ದರು. ಸಿನಿಮಾ ಶುರುವಾಗುವ ಮುನ್ನವೇ ತಿಂಡಿಯನ್ನು ತಮ್ಮ ಮಡಿಲಿನ ಮೇಲೆ ಇರಿಸಿಕೊಂಡು ಕುಳಿತುಕೊಂಡಿದ್ದರು. ಈ ಸಂದರ್ಭದಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುಂಚೆ ರಾಷ್ಟ್ರಗೀತೆಯನ್ನು ಬಿತ್ತರಿಸಲಾಗಿದೆ. ಆದರೆ, ಮಡಿಲಿನಲ್ಲಿ ತಿಂಡಿ ಇರಿಸಿಕೊಂಡಿದ್ದರಿಂದ ಇಬ್ಬರು ಎದ್ದು ನಿಂತುಕೊಳ್ಳಲು ಆಗಲಿಲ್ಲ. ಇದಕ್ಕೆ ಅವರ ಅಕ್ಕಪಕ್ಕ ಕುಳಿತಿದ್ದ ಕೆಲ ಪ್ರೇಕ್ಷಕರು ಆಕ್ಷೇಪಿಸಿದ್ದಾರೆ. ಇದರಿಂದಾಗಿ ಮಾತಿಗೆ ಮಾತು ನಡೆದು ಗಲಾಟೆ ಶುರುವಾಗಿದೆ.
ತಕ್ಷಣ ಚಿತ್ರಮಂದಿರದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಜಯಲಕ್ಷ್ಮೀ ಪುರಂ ಠಾಣೆಯ ಪೊಲೀಸರು, ದಂಪತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಒಳಪಡಿಸಿದ್ದಾರೆ.
ಈ ಸಂದರ್ಭದಲ್ಲಿ ‘ನಮ್ಮ ಕಡೆಯಿಂದ ತಪ್ಪು ಆಗಿದೆ’ ಎಂದು ಹೇಳಿದ ಅನ್ಯ ಧರ್ಮದ ದಂಪತಿ ಕ್ಷಮೆ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬುದ್ಧಿವಾದ ಹೇಳಿ ಅವರನ್ನು ಅಲ್ಲಿಯಿಂದ ಮನೆಗೆ ಕಳುಹಿಸಿಕೊಟ್ಟಿದ್ದಾರೆ.