ಜೋಗಿ ಮಠದಲ್ಲಿ ಕಾಲಭೈರವ ದೇವರಿಗೆ ಅವಮಾನ, ಅಪಚಾರ ವಿರೋಧಿಸಿ 27ರಂದು ಉಪವಾಸ ಸತ್ಯಾಗ್ರಹ, ಮುಂದಿನ ಜುಡಿಗೆ ಉಡುಪಿಯಲ್ಲಿ ತಡೆಗೆ ನಿರ್ಧಾರ

jogi
Published on

ಮಂಗಳೂರು: ಕದ್ರಿ ಜೋಗಿ ಮಠದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಕಾಲಭೈರವ ದೇವರಿಗೆ ಬ್ರಹ್ಮಕಲಶೋತ್ಸವ ಹಾಗೂ ಮೂರ್ತಿ ಪುನಃ ಪ್ರತಿಷ್ಠಾಪನೆ ಸಂದರ್ಭ ಮಠಾಧಿಪತಿ ಶ್ರೀ ನಿರ್ಮಲ್‌ನಾಥ ತಮ್ಮ ಗಮನಕ್ಕೆ ತರದೆ ಹಳೆಯ ಕಾಲಭೈರವ ದೇವರ ಮೂರ್ತಿಯ ಸ್ಥಾನಕ್ಕೆ ಸಮರ್ಪಕ ವೈದಿಕ ಕ್ರಿಯೆ ಮಾಡದೆ ಬೇರೆ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಲಭೈರವ ದೇವರಿಗೆ ಹಾಗೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಅಪಚಾರ ವಿರೋಧಿಸಿ ಆ.27ರಂದು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ ಎಂದು ಕದ್ರಿ ಜೋಗಿ ಮಠದ ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷ ಹರಿನಾಥ್ ಎಂ. ತಿಳಿಸಿದರು.

ಈಗಿನ ಮಠಾಧಿಪತಿಗಳು ರಾಜಸ್ತಾನದ ಭಕ್ತರು ಹಾಗೂ ಕೆಲ ಮಾರ್ವಾಡಿಗಳೊಂದಿಗೆ ಸೇರಿಕೊಂಡು ಪುರಾತನ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಕಾಲಭೈರವ ದೇವರ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿ ಬಿಸಾಡಿದ್ದರು. ಯಾವುದೇ ವಿಧಿವಿಧಾನ ಅನುಸರಿಸದೆ ಚೀಲದಿಂದ ತೆಗೆದು ವಿಗ್ರಹ ಕೂರಿಸಿದ್ದಾರೆ. ಆ ಸಂದರ್ಭ ಮಹಿಳೆಯರು ಸೇರಿದಂತೆ ಅನೇಕರು ಗರ್ಭಗುಡಿಯ ಒಳಗಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಈ ಜೋಗಿ ಮಠ ಜೋಗಿ ಸಮುದಾಯಕ್ಕೆ ಸೇರಿದ್ದು, ಮಠಾಧೀಶರ ನಿರ್ದೇಶನದಲ್ಲಿ ಜೋಗಿಗಳೇ ಪ್ರತಿನಿತ್ಯ ಪೂಜೆ ನಡೆಸಬೇಕು ಎಂದು ಹೇಳಿದರು.

ಕದ್ರಿ ಜೋಗಿ ಮಠ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶರತ್ ಕುಮಾರ್, ಕದ್ರಿ ಜೋಗಿ ಮಠದ ಜಿರ್ಣೋದ್ಧಾರ ಮತ್ತು ಕಾರ್ಯ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಹರೀಶ್ ಎಸ್. ಜೋಗಿ ಸಮಾಜದ ಪ್ರಮುಖರಾದ ಕೆ. ದಯಾನಂದ ಜೋಗಿ, ಬಾಲಕೃಷ್ಣ ಕದ್ರಿ, ನಾಗೇಂದ್ರ ಚಿಲಿಂಬಿ, ಸತೀಶ್ ಜೋಗಿ ಮಾಲೆಮಾರ್, ವಿದ್ಯಾ, ಗಣೇಶ್, ಭ್ರಮಿತ್ ಇದ್ದರು.

70 ಲಕ್ಷ ರೂ.ಗೆ ಮಾರಾಟಕ್ಕೆ ಯತ್ನ

ಹಳೆಯ ಕಾಲಭೈರವ ದೇವರ ವಿಗ್ರಹವನ್ನು 70 ಲಕ್ಷ ರೂ.ಗೆ ಮಠಾಧಿಪತಿಗಳು ಮಾರಾಟಕ್ಕೆ ಯತ್ನಿಸಿದ್ದರು ಎಂದು ಹರಿನಾಥ್ ಎಂ ಆರೋಪಿಸಿದರು. ನಾವು ಪ್ರಾಚ್ಯವಸ್ತು ಇಲಾಖೆಯನ್ನು ಸಂಪರ್ಕಿಸಿ ಮಾರಾಟವನ್ನು ನಿಲ್ಲಿಸಿದ್ದೇವೆ. ಮೊದಲಿನ ವಿಗ್ರಹವನ್ನೇ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ಬಾರದ ಕಾರಣ ಆ.27ರಂದು ಬೆಳಗ್ಗೆ 8ರಿಂದ ಸಂಜೆ 6ರ ತನಕ ಕದ್ರಿ ಜೋಗಿ ಮಠ ಹಿತರಕ್ಷಣಾ ಸಮಿತಿ, ದ.ಕ. ಜೋಗಿ ಸಮಾಜ ಸುಧಾರಕ ಮಾತೃ ಸಂಘ, ಕದ್ರಿ ಶ್ರೀ ಜೋಗಿ ಮಠ ಜೀರ್ಣೋದ್ಧಾರ ಮತ್ತು ನಿರ್ವಹಣಾ ಸಮಿತಿ ನೇತೃತ್ವದಲ್ಲಿ ಕದ್ರಿ ಜೋಗಿ ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಈಗಿನ ಮಠಾಧಿಪತಿಗೆ ಇನ್ನೂ 4 ವರ್ಷದ ಆಡಳಿತ ಇದ್ದು, ಇದು ಬಗೆಹರಿಯದಿದ್ದಲ್ಲಿ ಮುಂದೆ ಆಗಮಿಸುವ ಝುಂಡಿಯನ್ನು ಉಡುಪಿಯಲ್ಲೇ ತಡೆಯಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net