ಹಿಂದಿನಿಂದಲೂ ಡಾ.ಅಂಬೇಡ್ಕರ್‌ಗೆ ಅಪಮಾನ: ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎನ್.ಮಹೇಶ್ ಟೀಕೆ

IMG_5199
Published on

ಮೈಸೂರು: ಸ್ವಾತಂತ್ರೃ ಪೂರ್ವದಿಂದ ಇಂದಿನ ತನಕ ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನ ಮಾಡಿಕೊಂಡೇ ಬರುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಟೀಕಿಸಿದರು.
ಬಿಜೆಪಿಯ ಪರಿಶಿಷ್ಟ ಜಾತಿಯ ಎಡ, ಬಲ ಕಾರ್ಯಕರ್ತರಿಗಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವತಂತ್ರ ಪೂರ್ವದಿಂದಲೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ವಂಚಿಸುತ್ತಲೇ ಬಂದಿದೆ. ಈಗಲೂ ಅದನ್ನು ಮುಂದುವರಿಸಿದೆ. ದೇಶಕ್ಕೆ ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನ ನೀಡಿದಂತಹ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ವಂಚನೆ ಮಾಡಿತು. ಈಗ ರಾಜಕೀಯಕ್ಕಾಗಿ ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಸ್ವತಂತ್ರಾೃನಂತರ ಮತ್ತು ಇಂದಿನ ತನಕ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ಮಾತ್ರವಲ್ಲ, ಅವರ ಹೆಸರು ಹೇಳಿಕೊಂಡು ಪರಿಶಿಷ್ಟ ಜಾತಿಯವರಿಗೂ ಮೋಸ ಮಾಡಿಕೊಂಡು ಬರುತ್ತಿದೆ. ಪರಿಶಿಷ್ಟ ಜಾತಿಗಳನ್ನು ಎತ್ತಿಕಟ್ಟಿ ಅನ್ಯಾಯಗಳ ಸರಮಾಲೆಯನ್ನೇ ಹಾಕಿದೆ ಎಂದು ದೂರಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕಾಂಗ್ರೆಸ್ ಪರಿಶಿಷ್ಟ ಜಾತಿ ಅವರಿಗೆ ಮಾಡಿದ ಅನ್ಯಾಯ ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮನೆ ತಲುಪಿಸುವಂತಾಗಲಿ ಎಂದು ಹೇಳಿದರು.
ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ಇತಿಹಾಸವನ್ನು ತಿರುಚಿದ್ದು, ನಿಜವಾದ ಇತಿಹಾಸವನ್ನು ಅಧ್ಯಯನ ಮಾಡಿ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಅಂಬೇಡ್ಕರ್‌ಗೆ ಅಗಿರುವ ಅನ್ಯಾಯವನ್ನು ಮನದಟ್ಟು ಮಾಡಿಕೊಡಬೇಕು ಎಂದರು.
ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸಮಾವೇಶ ಉದ್ಘಾಟಿಸಿದರು. ಮುಖಂಡರಾದ ಎಸ್.ಮಹದೇವಯ್ಯ, ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್.ಪರಮಾನಂದ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್, ಮುಖಂಡರಾದ ಸಿ.ಎಂ. ಮಹಾದೇವಯ್ಯ, ಈಶ್ವರ್, ಮಹೇಶ್ ಮಡವಾಡಿ, ಡಾ.ರೇವಣ್ಣ, ಮಾಜಿ ಉಪ ಮೇಯರ್ ಶೈಲೇಂದ್ರ, ನಗರಪಾಲಿಕೆ ಮಾಜಿ ಸದಸ್ಯರಾದ ಡಾ.ಅಶ್ವಿನಿ ಶರತ್, ವೇದಾವತಿ, ಶಾರದಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net