

ಎನ್.ಆರ್.ಪುರ: ಬಿಜೆಪಿ ದಲಿತ, ಸಂವಿಧಾನ ವಿರೋಧಿ ಎಂದು 60 ವರ್ಷದಿಂದಲೂ ಕಾಂಗ್ರೆಸ್ ಹಾಗೂ ಕೆಲ ಬುದ್ಧಿ ಜೀವಿಗಳು ಸುಳ್ಳ ಹೇಳಿಕೊಂಡು ಬರುತ್ತಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಆರೋಪಿಸಿದರು.
ದ್ವಾರಮಕ್ಕಿಯ ಮಾಜಿ ಸಚಿವ ಡಿ.ಎನ್.ಜೀವರಾಜ್ ಮನೆ ಅಂಗಳದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ದಲಿತರು ಹಾಗೂ ಹಿಂದಳಿದ ವರ್ಗದವರಿಗಾಗಿ ಏರ್ಪಡಿಸಿದ್ದ ಭೀಮ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಅಂಬೇಡ್ಕರ್ ಬರೆದ ಸಂವಿಧಾನ ಭಾರತ ದೇಶದ ಐಕ್ಯತೆ ಕಾಪಾಡಬೇಕು ಎಂದು ಹೇಳುತ್ತಿದೆ. ಸಂವಿಧಾನದಿಂದ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಆಹಾರ ಉತ್ಪಾದನೆ, ಉದ್ಯೋಗದಲ್ಲಿ ಸ್ವಾತಂತ್ರ ದೊರೆತಿದೆ. ಸಂವಿಧಾನದಿಂದಲೇ ಸಾಮಾನ್ಯ ಮನುಷ್ಯನು ಸಹ ಉನ್ನತ ಹುದ್ದೆಗೆ ಹೋಗಬಹುದಾಗಿದೆ. ಅಂಬೇಡ್ಕರ್ ಸಂವಿಧಾನದ ಮೂಲಕ ರಕ್ತ ರಹಿತವಾಗಿ ದೇಶಕ್ಕೆ ಸಮಾನತೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ಡಾ.ಅಂಬೇಡ್ಕರ್‌ಗೆ ಅವಮಾನ ಮಾಡಿದೆ. 1951ರಲ್ಲಿ ಡಾ.ಅಂಬೇಡ್ಕರ್ ಕಾನೂನು ಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ ಕೊಡಬೇಕು ಎಂದು ಆಗ್ರಹಿಸಿದ್ದರು. ಪ್ರಧಾನಿ ನೆಹರೂ ಅವಕಾಶ ನೀಡದಿದ್ದಾಗ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಎಸ್ಸಿ , ಎಸ್ಟಿ , ಒಬಿಸಿ ಯವರಿಗೂ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂದು ಅಂಬೇಡ್ಕರ್ ಒತ್ತಾಯಿಸಿದರೂ ನೆಹರೂ ಅವಕಾಶ ನೀಡಲಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಕಾಂಗ್ರೆಸ್ ಸುಳ್ಳನ್ನು ಸತ್ಯ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿ ಸಂವಿಧಾನ ವಿರೋಧಿ ಅಲ್ಲ. ನಾನು ಶಾಸಕನಾಗಿದ್ದಾಗ ಶೃಂಗೇರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ದಲಿತ ಕೇರಿಗಳಿಗೆ ಕಾಂಕ್ರೀಟ್ ರಸ್ತೆ, ಗಂಗಾ ಕಲ್ಯಾಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿತ್ತು ಎಂದರು.
ಯುವ ಮೋರ್ಚದ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಎಸ್ಸಿ ಮೋರ್ಚಾ ವಕ್ತಾರ ಶೃಂಗೇರಿ ಶಿವಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್, ನಿಕಟಪೂರ್ವ ಅಧ್ಯಕ್ಷ ಅರುಣ ಕುಮಾರ್, ಕೊಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ದಿನೇಶ್ ಹೊಸೂರು ಇದ್ದರು.