

ಮೈಸೂರು: ಮಹಿಷ ದಸರಾ ಆಚರಣೆ ನೆಪದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಪಮಾನಿಸುವ ಕೆಲಸವಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಸೆ.13ರಂದು ‘ಚಲೋ ಚಾಮುಂಡಿ ಬೆಟ್ಟ’ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಮೈಸೂರಿನ ಕೆಲವರು ಮಹಿಷ ದಸರಾ ಆಚರಿಸುವ ಮೂಲಕ ನಾಡಿನ ಅಸ್ಮಿತೆ ತಾಯಿ ಚಾಮುಂಡೇಶ್ವರಿಯನ್ನು ದೆವ್ವವಾಗಿ ಬಿಂಬಿಸುವ ಕೆಲಸ ಮಾಡಿದ್ದರು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈಗ ಮತ್ತೆ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಮುಂದಾಗಿದ್ದಾರೆ. ಇದನ್ನು ಬುಡಸಮೇತ ಕಿತ್ತುಹಾಕಬೇಕಿದ್ದು, ಅಂದು ಬೆಳಗ್ಗೆ 8 ಗಂಟೆಗೆ 5 ಸಾವಿರಕ್ಕೂ ಹೆಚ್ಚು ಭಕ್ತರು ಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಲಿದ್ದೇವೆ. ದೇವಿ ದರ್ಶನದ ಬಳಿಕ ಯಾವುದೇ ಅಪದ್ಧ ನಡೆಯದಂತೆ ಮಹಿಷನ ಪ್ರತಿಮೆ ಬಳಿ ಪಹರೆ ನಿಲ್ಲುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಹತ್ತಾರು ಸಂಘಟನೆಗಳು ಅಂದು ನಡೆಯುವ ಚಲೋ ಚಾಮುಂಡಿ ಬೆಟ್ಟಕ್ಕೆ ಬೆಂಬಲ ಸೂಚಿಸಿವೆ. ಅಂದು ಬೆಟ್ಟದ ಪಾದದ ಮೂಲಕ ಚಾಮುಂಡಿ ಬೆಟ್ಟ ಹತ್ತಲಾಗುವುದು. ವಾಹನಗಳಲ್ಲಿ ಬರುವವರು ಬೆಟ್ಟಕ್ಕೆ ಬರಬಹುದು. ಐದು ಸಾವಿರ ಮಂದಿ ದಿನವಿಡೀ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಲಾಗುವುದು. ಈಗಾಗಲೇ ಪೊಲೀಸ್ ಇಲಾಖೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ನಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ತಪ್ಪದೆ ಪಾಲ್ಗೊಳ್ಳಬೇಕು. ಕೆಲವರು ಮಾಡುತ್ತಿರುವ ಅನಾಚಾರ ತಡೆಯಲು ಭಕ್ತರು ಕೈಜೋಡಿಸಬೇಕು. ಧರ್ಮಾತೀತ, ಪಕ್ಷಾತೀತವಾಗಿ ಎಲ್ಲರೂ ಬೆಟ್ಟಕ್ಕೆ ಬರಬೇಕು. ಮಹಿಷ ದಸರಾ ತಡೆಯುವ ಉದ್ದೇಶದಿಂದ ಸಂಘರ್ಷಕ್ಕೂ ಸಿದ್ಧವಿದ್ದೇವೆ. ಸಿದ್ಧಾಂತದ ಎಲ್ಲೆಯನ್ನು ಮೀರಿ, ಅವಮಾನ ಮಾಡಿ ನಂತರ ಪೂಜಿಸುವುದು ಅನೈತಿಕ ಅಲ್ಲವೇ ಎಂದು ಪ್ರಶ್ನಿಸಿದರು.
ಮಹಿಷ ದಸರಾ ಉದ್ಘಾಟನೆಗೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರು ಆ ಲಲಿತಾ ನಾಯಕ್? ರಾಜ್ಯದಲ್ಲಿ ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದಾಗ, ಅವರ ಪುತ್ರ ಪಾನಮತ್ತನಾಗಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದರು. ಅಂಬೇಡ್ಕರ್ ವಾದಿಗಳೆಂದು ಹೇಳಿಕೊಳ್ಳುವ ಬುದ್ಧಿಜೀವಿಗಳು ಇಂತಹವರನ್ನು ಆಹ್ವಾನಿಸಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರತಾಪಸಿಂಹ ಪ್ರಶ್ನಿಸಿದರು.
2009ರಲ್ಲಿ ಮೇಯರ್ ಆಗಿದ್ದ ಪುರುಷೋತ್ತಮ ದಸರಾ ವೇಳೆ ಹೇಗೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದ್ದರು? ಆಗ ಮಹಿಷ ನೆನಪಾಗಲಿಲ್ಲವೇ? ಮಹಿಷ ದಸರಾಕ್ಕೆ 50 ವರ್ಷಗಳ ಇತಿಹಾಸ ಇರುವುದಾಗಿ ಹೇಳುತ್ತ, ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಆ, ಬಿಜೆಪಿ ಪ್ರಭಾರಿ ಮೈ.ವಿ. ರವಿಶಂಕರ್, ಪ್ರಧಾನ ಕಾರ್ಯದರ್ಶಿ ಎಚ್.ಜಿ. ಗಿರಿಧರ್, ವಾಣೀಶ್ ಇದ್ದರು.
ನಾವು ಸಂಘರ್ಷದಿಂದಲೇ ಪಕ್ಷ, ದೇಶ ಕಟ್ಟಿದ್ದೇವೆ. ದೇಶಕ್ಕಾಗಿ ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಸಂಘರ್ಷವನ್ನೇ ಮಾಡಬೇಕು. ಇಲ್ಲಿ ಧರ್ಮ ಉಳಿಸಲು ಸಂಘರ್ಷ ಮಾಡಬೇಕಿದೆ. ಮುಂದೆಯೂ ಚಾಮುಂಡೇಶ್ವರಿ ದೇವಿಗೆ ಆಗುತ್ತಿರುವ ಅಪಮಾನವನ್ನು ತಪ್ಪಿಸುತ್ತೇವೆ. ಎಂತಹ ಸನ್ನಿವೇಶ ಬಂದರೂ ಎದುರಿಸಲು ಸಿದ್ಧರಿದ್ದೇವೆ.ಪ್ರತಾಪ್ ಸಿಂಹ, ಸಂಸದ