

ವಿಜಯವಾಣಿ ಸುದ್ದಿಜಾಲ ಉಡುಪಿ
ಧರ್ಮಸ್ಥಳ ಕ್ಷೇತ್ರದ ಕುರಿತು ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಸೆಡ್ಡು ಹೊಡೆದು, ಕ್ಷೇತ್ರದಪರ ನಿಂತ ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಿಂದು ವಿರೋಧಿಗಳ ನಡೆಗೆ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಲ್ಲುವವರನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುವ ಪಿತೂರಿ ಮುಂದುವರಿದಿದೆ. ತನ್ಮೂಲಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಮಾತನಾಡಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ವಿಫಲ ಪ್ರಯತ್ನದಲ್ಲಿ ಮತಾಂಧ ಶಕ್ತಿಗಳು ನಿರತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರಾಗಿದ್ದರೂ ರಾಷ್ಟ್ರ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ಕೋಟ್ಯಂತರ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿ, ತಾಯಿ ಭಾರತಿ ಸೇವೆಯಲ್ಲಿ ನಿರತರಾಗಿದ್ದಾರೆ. ಅಂತಹವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಸಮಸ್ತ ಹಿಂದು ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ ಎಂದಿದ್ದಾರೆ.
ಮತಾಂಧರ ಹೇಳಿಕೆಯಿಂದ ವಿಚಿಲತರಾಗುವುದೂ ಇಲ್ಲ, ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ವಿರುದ್ಧದ ಧರ್ಮಪರ ಹೋರಾಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದಪರ ನಿಂತಿರುವ ಹಿಂದು ನಾಯಕರ ತೇಜೋವಧೆ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹಿಂದು ಕಾರ್ಯಕರ್ತರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಯಶ್ಪಾಲ್ ಎಚ್ಚರಿಕೆ ನೀಡಿದ್ದಾರೆ.