

ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಕಾರ್ಮಿಕ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅನಿರ್ದಿಷ್ಟಾವಧಿ ಧರಣಿಗೆ ಸಜ್ಜಾಗಿವೆ.
ಈಗಾಗಲೇ ಧರಣಿಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಡಿ. 21 ರಂದು ಬೆಳಗ್ಗೆ 10ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಮಹಾತ್ಮ ಗಾಂಧಿ, ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ಜಿಲ್ಲಾಡಳಿತ ಕಚೇರಿ ಎದುರು ಧರಣಿ ಆರಂಭಗೊಳ್ಳಲಿದೆ ಎಂದು ಸಂಘಟಕರು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಅಮಿತ್ ಷಾ ತಮ್ಮ ಪಕ್ಷ ಹಾಗೂ ಸಂಘ ಪರಿವಾರದ ಮನಃಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಅಮಿತ್ ಷಾ ಅಂತರಾಳ ಸಂಸತ್‌ನಲ್ಲಿ ಬಹಿರಂಗಗೊಂಡಿದೆ. ಸಂವಿಧಾನದ ಮೇಲೆ ಇವರಿಗೆ ನಂಬಿಕೆ ಇಲ್ಲವೆಂದು ಅಮಿತ್ ಷಾ ಹೇಳಿಕೆ ಸಾಬೀತು ಪಡಿಸಿದೆ. ಹೀಗಾಗಿ ಸಂವಿಧಾನ ಬದ್ಧವಾಗಿರುವ ಗೃಹ ಸಚಿವ ಸ್ಥಾನವನ್ನು ತ್ಯಜಿಸುವವರೆಗೆ ಧರಣಿ ಮುಂದುವರಿಸಲಾಗುವುದು ಎಂದರು.
ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಡಾ.ಅಂಬೇಡ್ಕರ್ ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತಿನ ನಾಯಕ. ಇಂಥ ನಾಯಕರ ಬಗ್ಗೆ ಅವಹೇಳನ ಮಾಡುವ ಮೂಲಕ ಅಮಿತ್ ಷಾ ತಮ್ಮಮನುವಾದದ ಮನಃಸ್ಥಿತಿಯನ್ನು ಹೊರಹಾಕಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ರಾಜ್ಯಸಭೆಯಲ್ಲಿ ಅಮಿತ್ ಷಾ ಆಡಿರುವ ಮಾತು ದೇಶವೇ ಖಂಡಿಸುವಂಥದ್ದು. ಅಂಬೇಡ್ಕರ್....ಅಂಬೇಡ್ಕರ್...ಎಂದು ಹೇಳುವ ಬದಲು ದೇವರ ಹೆಸರು ಹೇಳಿದ್ದರೆ ಸ್ವರ್ಗಕ್ಕೆ ಹೋಗಬಹುದಿತ್ತು ಎನ್ನುವ ಅಮಿತ್ ಷಾ ಪ್ರತಿ ದಿನ ಮೋದಿ....ಮೋದಿ....ಮೋದಿ ಎನ್ನುತ್ತಾರಲ್ಲ...ಅವರು ಸ್ವರ್ಗಕ್ಕೆ ಹೋಗುತ್ತಾರೋ ಅಥವಾ ನರಕಕ್ಕೆ ಹೋಗುತ್ತಾರೋ ಎಂದು ಪ್ರಶ್ನಿಸಿದರು.
ಮುಂದುವರಿದು ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ್ದನ್ನು ಸಹಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಹಿಸಲಾಗುತ್ತಿಲ್ಲ. ನಿಮ್ಮ ಪಕ್ಷ ಹಾಗೂ ಸಂಘಪರಿವಾರದ ಅಂತಂಗದ ಸತ್ಯ ಇದೀಗ ಹೊರ ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸಹ ಅಮಿತ್ ಷಾ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಇಂಥ ಸಂವಿಧಾನ ವಿರೋಧಿ ಹಾಗೂ ಡಾ.ಅಂಬೇಡ್ಕರ್ ಅವರ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಭಾರತದ ಅಗ್ರಗಣ್ಯ ನಾಯಕನನ್ನುಅವಮಾನಿಸಿರುವ ಅಮಿತ್ ಷಾ ವಿರುದ್ಧ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಮಾತ್ರವಲ್ಲ, ಅಮಿತ್ ಷಾ ಕ್ಷಮೆ ಯಾಚಿಸುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದರು.
ಅಲ್ಲದೇ, ಅಪರಾಧ ಹಿನ್ನೆಲೆ ಹೊಂದಿ ಗಡಿಪಾರು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಪಾರ್ಲಿಮೆಂಟ್ ಸೇರಿದರೆ ಏನಾಗಲಿದೆ ಎಂಬುದಕ್ಕೆ ಇದೇ ಉದಾಹರಣೆ. ಕೂಡಲೇ ಈ ಅಮಿತ್ ಷಾನನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು
ಮುಖಂಡ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಬಾಬಾಸಾಹೇಬರಿಗೆ ಆದ ಅವಮಾನವನ್ನು ಬಿಜೆಪಿ ಸಮರ್ಥಿಸಿಕೊಂಡಿರುವುದು ಹೇಯ. ಸಂಸದರಾದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಹಾಗೂ ಉಮೇಶ ಕಾರಜೋಳ ತಮ್ಮ ಪಕ್ಷದ ನಿಲುವು ಸಮರ್ಥಿಸಿಕೊಂಡು ಹೇಳಿಕೆ ಕೊಟ್ಟಿದ್ದು ಖಂಡನೀಯ. ಇಂಥ ಹೇಳಿಕೆ ನೀಡುವ ಮೊದಲು ಎಚ್ಚರಿಕೆಯಿಂದ ಇರಬೇಕು. ತಾವು ಬಂದಿದ್ದು ಎಲ್ಲಿಂದ ಎಂಬುದನ್ನು ಅರಿತು ಮಾತನಾಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಅನಸೂಯಾ ಮಾತನಾಡಿ, ಈ ದೇಶದಲ್ಲಿ ಮಹಿಳೆಯರಿಗೆ ಸಮಾನತೆ ತಂದುಕೊಟ್ಟವರು ಅಂಬೇಡ್ಕರ್. ಅಂಥ ಮಹಾನ್ ನಾಯಕನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅಮಿತ್ ಷಾ ಕೂಡಲೇ ಕ್ಷಮೆ ಕೇಳದೇ ಹೋದರೆ ಜನವಾದಿ ಮಹಿಳಾ ಸಂಘದಿಂದ ರಾಷ್ಟ್ರಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ಮುಖಂಡರಾದ ಬಾಲಾಜಿ ಕಾಂಬಳೆ, ಪ್ರಭುಗೌಡ ಪಾಟೀಲ, ಫಯಾಜ್ ಕಲಾದಗಿ, ಎಂ.ಸಿ. ಮುಲ್ಲಾ, ಬಾಪುಗೌಡ ಹಿರೇಗೌಡರ ಮೆಹಬೂಬಿ ಮತ್ತಿತರರಿದ್ದರು.