

ಉಡುಪಿ: ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಪಟಾಕಿಗಳ ಮಾರಾಟ ಮತ್ತು ನಿಯಂತ್ರಿಸುವ ಕುರಿತು ಮಾತನಾಡಿದ ಅವರು, ನವೆಂಬರ್ 12 ರಿಂದ 15 ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಪಟಾಕಿಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿರುತ್ತದೆ. ರಾತ್ರಿ 8 ರಿಂದ ರಾತ್ರಿ 11 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಲಾಗುವುದು. ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆಯಿದ್ದು, ಕ್ಯೂಆರ್ ಕೋಡ್ ಇರುವ ಪಟಾಕಿಗಳನ್ನೇ ಉಪಯೋಗಿಸಬೇಕು.
ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗೂ ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸುಡುಮದ್ದುಗಳನ್ನು ಸ್ಪೋಟಿಸುವಂತಿಲ್ಲ.
ತಹಶೀಲ್ದಾರರು, ವೃತ್ತ ನಿರೀಕ್ಷಕರು, ಸ್ಥಳಿಯ ಸಂಸ್ಥೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಿ, ಅಲ್ಲಿ ಹಸಿರು ಪಟಾಕಿಯಲ್ಲದೆ, ಇನ್ನಾವುದಾದರೂ ನಿಷೇದಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಿತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇದಿತ ಪಟಾಕಿಗಳನ್ನು ಸಾಗಾಟ ಮಾಡುವ ನಿರೀಕ್ಷೆಯಿದ್ದು, ದೀಪಾವಳಿ ಹಬ್ಬ ಮುಗಿಯುವವರೆಗೂ ಜಿಲ್ಲೆಯ ಎಲ್ಲಾ ಗಡಿಭಾಗಗಳ ಚೆಕ್ ಪೋಸ್ಟ್ಗಳನ್ನು ವಾಣಿಜ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ, ನಿಷೇಧಿತ ಪಟಾಕಿಗಳು ಇದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕು. ದೀಪಾವಳಿ ಸಮಯದಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಯ ಕುರಿತು ಸ್ಥಳಿಯ ಸಂಸ್ಥೆಗಳು ಕ್ರಮಹಿಸಬೇಕು ಎಂದು ಸೂಚನೆ ನೀಡಿದ್ದಾರೆ.