

ರಾಯಚೂರು ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ನಗರದ ಹೊರವಲಯದ ಇಂಡಸ್ಟ್ರಿಯಲ್ ಗ್ರೋತ್ ಸೆಂಟರ್‌ಗೆ ಬುಧವಾರ ಭೇಟಿ ನೀಡಿತು.
ತಂಡವು ಕೆಐಎಡಿಬಿ ಪ್ರದೇಶಕ್ಕೆ ಆಗಮಿಸಿದ ಶಾಸಕರು, ಅಲ್ಲಿನ ರಸ್ತೆಗಳು ಸರಿ ಇಲ್ಲದ್ದನ್ನು, ಮೂಲ ಸೌಲಭ್ಯಗಳು ಕಾಣದೇ ಇರುವುದನ್ನು ಕಂಡು ಅಸಮಧಾನ ವ್ಯಕ್ತಪಡಿಸಿದರು. ’ಇಲ್ಲಿನ ಕಾರ್ಖಾನೆಗಳ ವಾಸ್ತವ ಪರಿಸ್ಥಿತಿ ಏನಿದೆ ಎಂದು ಗೊತ್ತಿದೆಯಾ. ಇಲ್ಲಿಗೆ ಆಗಾಗ ಭೇಟಿ ಕೊಡ್ತೀರಾ’ ಎಂದು ಕೆಐಎಡಿಬಿ ಎಂಜಿನಿಯರುಗಳಿಗೆ ಸಮಿತಿಯ ಅಧ್ಯಕ್ಷರು ಪ್ರಶ್ನಿಸಿದರು. ಈ ಪ್ರದೇಶದಲ್ಲಿನ ಸೌಲಭ್ಯಗಳು, ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ಮಾಡಿದ ಸಮಿತಿಯ ಅಧ್ಯಕ್ಷರು, ಇಲ್ಲಿ ಯಾವ ಯಾವ ಸಮಸ್ಯೆಗಳಿವೆ. ಅದಕ್ಕೆ ಕೆಐಎಡಿಬಿ ಏನು ಮಾಡುತ್ತಿದೆ ಎಂಬುದರ ಕುರಿತು ಕ್ರಮ ವಹಿಸಿದ ಬಗ್ಗೆ ವರದಿ ನೀಡಬೇಕು ಎಂದು ಕೆಐಎಡಿಬಿ ಎಂಜಿನಿಯರುಗಳಿಗೆ 15 ದಿನಗಳ ಗಡುವು ವಿದಿಸಿದರು.
ಸಾರ್ವಜನಿಕರಿಂದ ಅಸಮಾಧಾನ ಇಲ್ಲಿನ 15 ಕೆಮಿಕಲ್ ಫ್ಯಾಕ್ಟರಿಗಳ ನೀರನ್ನು ಕೆರೆಗೆ ಬಿಡಲಾಗಿದೆ. ಈ ನೀರು ಬಿಟ್ಟು ಸುಮಾರು 2000 ಜಮೀನಿನ ಮಣ್ಣು ಹಾಳಾಗಿದೆ. ಪ್ರತಿ ದಿನ ನಾಲ್ಕಾರು ಎಮ್ಮೆಗಳು ಸಾಯುತ್ತಿವೆ. ಈ ಇಂಡಸ್ಟ್ರಿಗಳು ಪಕ್ಕದ ಜಮೀನುಗಳಿಗೆ ಸರ್ವೀಸ್ ರಸ್ತೆ ಬಿಡದ ಹಾಗೆ ಹದ್ದು ಬಸ್ತ್ ಮಾಡಿಕೊಂಡಿವೆ. ರಾತ್ರಿ ವೇಳೆ ಕೆಮಿಕಲ್ ತಂದು ಸುರುವುದರಿಂದ ವಿಪರೀತ ಕೆಟ್ಟ ವಾಸನೆ ಬರುತ್ತಿದೆ. ಮಕ್ಕಳು ಇಲ್ಲಿ ನಿದ್ದೆ ಮಾಡದಂತಹ ದುಸ್ಥಿತಿ ಎದುರಾಗಿದೆ ಎಂದು ಅಲ್ಲಿನ ಸ್ಥಳೀಯ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿರಾಣಿ ಹನುಮಂತಪ್ಪ್ ರುದ್ರಪ್ಪ, ಪ್ರತಾಪ ಸಿಂಹ ನಾಯಕ ಕೆ., ಡಿ.ಎಸ್.ಅರುಣ, ಕೆ.ಎಸ್.ನವೀಣ, ಮಂಜುನಾಥ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ, ಕಾಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ಡಿಸಿ ನಿತೀಶ್ ಕೆ ಸೇರಿ ಅನೇಕರು ಇದ್ದರು.