ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಲು ಸೂಚನೆ

Priyanga
Published on

ಲಕ್ಷ್ಮೇಶ್ವರ: ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಬೇಕು. ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸೂಚನೆ ನೀಡಿದರು. ಪಟ್ಟಣದ ಬಸ್ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಬೇಕು ಎಂದು ಸೂಚಿಸಿದರು. ಬಳಿಕ ಸಾರಿಗೆ ಘಟಕಕ್ಕೆ ಭೇಟಿ ನೀಡಿ ಜನಸಾಂದ್ರತೆಗೆ ಅನುಗುಣವಾಗಿ ಇನ್ನೂ 25 ಅನುಸೂಚಿಗಳನ್ನು ಹೆಚ್ಚಿಸುವಂತೆ ಸೂಚಿಸಿದರು. ಸಿಬ್ಬಂದಿ ವಸತಿ ಗೃಹ ಪರಿಶೀಲಿಸಿ ವ್ಯವಸ್ಥೆ ಮತ್ತು ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಹಾಗೂ ಸ್ಥಳೀಯ ಸಾರಿಗೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು. ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜ, ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ, ಘಟಕ ವ್ಯವಸ್ಥಾಪಕಿ ಸವಿತಾ ಆದಿ ಉಪಸ್ಥಿತರಿದ್ದರು.

ನಂತರ ಶಿರಹಟ್ಟಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದ ಶುಚಿತ್ವ, ಬಸ್‌ಗಳ ಕಾರ್ಯಾಚರಣೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಪರಿಶೀಲಿಸಿದರು. ಚಾಲನಾ ಸಿಬ್ಬಂದಿ ಕುಂದುಕೊರತೆ ಆಲಿಸಿ ಬಗೆಹರಿಸುವುದಾಗಿ ತಿಳಿಸಿದರು. ಡಿಪೊಗೆ ಭೇಟಿ ನೀಡಿ ನಿಗದಿತ ಸಮಯಕ್ಕೆ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡುವಂತೆ ತಿಳಿಸಿದರು. ಮುಂಬರುವ ದಿನಗಳಲ್ಲಿ ಸವದತ್ತಿ ಯಲ್ಲಮ್ಮ ಹಾಗೂ ಮೈಲಾರ ಜಾತ್ರೆ ಹಿನ್ನೆಲೆಯಲ್ಲಿ ಘಟಕದ ಧನಾತ್ಮಕ ಬೆಳವಣಿಗೆಗೆ ಶ್ರಮಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net