

ವಿಜಯಪುರ: ಜಿಲ್ಲೆಯ ಎಲ್ಲ 13 ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2024&25ನೇ ಆರ್ಥಿಕ ವರ್ಷದಲ್ಲಿ ವಸತಿ ರಹಿತರಿಗೆ ಮನೆ ಕಟ್ಟಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಈ ಮನೆಗಳ ಜಿಪಿಎಸ್ ಮಾಡಿ, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಗಳಿಗೆ ನಿರ್ದೇಶನ ನೀಡುವಂತೆ ಪ ಸದಸ್ಯ ಸುನೀಲಗೌಡ ಬಿ. ಪಾಟೀಲ ಜಿಲ್ಲೆಯ ಎಲ್ಲ ತಾಪಂ ಇಒಗಳಿಗೆ ಪತ್ರ ಬರೆದಿದ್ದಾರೆ.
ಈ ಎಲ್ಲ ಮನೆಗಳ ನಿರ್ಮಾಣಕ್ಕೆ ಸರ್ಕಾರ ಎಸ್ಸಿ ಫಲಾನುಭವಿಗಳಿಗೆ ರೂ. 43,750 ಮತ್ತು ಇತರೆ ಫಲಾನುಭವಿಗಳಿಗೆ ರೂ. 30,000 ಅನುದಾನವನ್ನು ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತಿದೆ.
ಜಿಲ್ಲೆಯ ಆಲಮೇಲ ತಾಲೂಕಿನ 13 ಗ್ರಾಪಂ ಗಳಲ್ಲಿ 511, ಬಬಲೇಶ್ವರ ತಾಲೂಕಿನ 16 ಗ್ರಾಪಂ ಗಳಲ್ಲಿ 711, ಬಸವನ ಬಾಗೇವಾಡಿ ತಾಲೂಕಿನ 18 ಗ್ರಾಪಂ ಗಳಲ್ಲಿ 1053, ಚಡಚಣ ತಾಲೂಕಿನ 13 ಗ್ರಾಪಂ ಗಳಲ್ಲಿ 823, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾಪಂ ಗಳಲ್ಲಿ 840, ಇಂಡಿ ತಾಲೂಕಿನ 39 ಗ್ರಾ ಪಂ ಗಳಲ್ಲಿ 1486, ಕೊಲ್ಹಾರ ತಾಲೂಕಿನ 10 ಗ್ರಾಪಂ ಗಳಲ್ಲಿ 675, ಮುದ್ದೇಬಿಹಾಳ ತಾಲೂಕಿನ 22 ಗ್ರಾಪಂ ಗಳಲ್ಲಿ 1307, ನಿಡಗುಂದಿ ತಾಲೂಕಿನ 11 ಗ್ರಾ ಪಂ ಗಳಲ್ಲಿ 207, ಸಿಂದಗಿ ತಾಲೂಕಿನ 18 ಗ್ರಾಪಂ ಗಳಲ್ಲಿ 457, ತಾಳಿಕೋಟಿ ತಾಲೂಕಿನ 14 ಗ್ರಾಪಂ ಗಳಲ್ಲಿ 774, ತಿಕೋಟಾ ತಾಲೂಕಿನ 15 ಗ್ರಾಪಂ ಗಳಲ್ಲಿ 771, ವಿಜಯಪುರ ತಾಲೂಕಿನ 17 ಗ್ರಾಪಂ ಗಳಲ್ಲಿ 770 ಫಲಾನುಭವಿಗಳ ಖಾತೆಗೆ ನೇರವಾಗಿ ಯೋಜನೆಯ ಹಣ ಜಮೆ ಆಗುತ್ತಿದೆ.
ಗ್ರಾಪಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಜಿಪಿಎಸ್ ಮಾಡಿಸಿ, ವಸತಿರಹಿತ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಂತೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಅಲ್ಲದೇ, ಜಿಪಿಎಸ್ ಮಾಡಿದ ಪ್ರತಿಯನ್ನು ವಿಧಾನ ಪರಿಷತ್ ಸದಸ್ಯರ ಕಚೇರಿಗೆ ಸಲ್ಲಿಸುವಂತೆ ಸುನೀಲಗೌಡ ಬಿ. ಪಾಟೀಲ ಅವರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.