

ಬ್ಯಾಡಗಿ: ಪಟ್ಟಣದ ಅರ್ಹ ಬಡವರಿಗೆ ಹಕ್ಕು ಪತ್ರ ನೀಡಲು ಆಶ್ರಯ ಸಮಿತಿಗೆ ಸೂಚಿಸಿದ್ದು, ಪುರಸಭೆ ಎಲ್ಲ ಸದಸ್ಯರ ಸಹಕಾರ ಪಡೆದು ನಿರಾಶ್ರಿತರಿಗೆ ನ್ಯಾಯ ಒದಗಿಸಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಆಶ್ರಯ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಬಡವರಿಗೆ ನಿವೇಶನ ನೀಡುವಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಹಲವು ವರ್ಷಗಳಿಂದ ಬಡಕುಟುಂಬಗಳು ಆಶ್ರಯಕ್ಕಾಗಿ ಕಾಯುತ್ತಿದ್ದಾರೆ. ಹಿಂದಿನ ನನ್ನ ಅವಧಿಯಲ್ಲಿ 10 ಎಕರೆ ಜಾಗ ಖರೀದಿಸಿ, 814 ಕುಟುಂಬಗಳನ್ನು ಆಯ್ಕೆಗೊಳಿಸಲಾಗಿತ್ತು. ಬಳಿಕ ಕಾರಣಾಂತರಗಳಿಂದ ಹಕ್ಕು ಪತ್ರ ವಿತರಣೆ ವಿಳಂಬವಾಗಿದೆ. ಹಿಂದೆ ಆಯ್ಕೆಗೊಂಡ ಕುಟುಂಬಗಳಲ್ಲಿ ಕೆಲವರು ಸ್ಲಂ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ಮನೆ ನಿರ್ವಿುಸಿಕೊಂಡಿದ್ದಾರೆ. ಅವರನ್ನು ಹೊರತುಪಡಿಸಿ ನ್ಯಾಯಸಮ್ಮತವಾಗಿ ನಿವೇಶನ ಹಂಚಿಕೆ ಮಾಡಬೇಕಿದ್ದು, ಆಶ್ರಯ ಸಮಿತಿ ಅಧ್ಯಕ್ಷರು, ಸದಸ್ಯರು ಹೆಚ್ಚು ಜವಾಬ್ದಾರಿಯಿಂದ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿಂದೆ ಆಯ್ಕೆಗೊಂಡ ಎಲ್ಲ ಅರ್ಜಿದಾರರ ಪುನರ್ ಪರಿಶೀಲನೆ ನಡೆಸಬೇಕು. ನೈಜವಾಗಿ ಅರ್ಹರಿಗೆ ಮಾತ್ರ ಹಕ್ಕು ಪತ್ರ ವಿತರಿಸಬೇಕು. ಹಿಂದೆ 30 ಸಾವಿರ ರೂ. ಹಣ ತುಂಬಿರುವ ಅರ್ಜಿದಾರರಿಗೆ ಹಣ ವಾಪಸ್ ನೀಡಿ, ಅವರಲ್ಲಿ ಅರ್ಹರಿದಲ್ಲಿ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡು ಬಡವರಿಗೆ ಉಚಿತವಾಗಿ ನಿವೇಶನ ನೀಡಲು ಸೂಚಿಸಿರುವೆ. ನಿವೇಶನಕ್ಕಾಗಿ ಯಾರೂ ಹಣ ತುಂಬುವುದು ಬೇಡ, ಗೊಂದಲ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಎಲ್ಲರಿಗೂ ನಿವೇಶನ ಭಾಗ್ಯ: ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರದ ಭೂಮಿಯನ್ನು ಗಣನೆಗೆ ತೆಗೆದುಕೊಂಡು ಹಂತಹಂತವಾಗಿ ಎಲ್ಲ ಬಡವರಿಗೆ ನಾವು ನಿವೇಶನ ವಿತರಿಸುತ್ತೇವೆ. ಒಂದೇ ಬಾರಿಗೆ ಎಲ್ಲರಿಗೂ ನಿವೇಶನ ನೀಡಲು ಭೂಮಿ ಕೊರತೆಯಿದ್ದು, ಅರ್ಜಿ ಹಾಗೂ ಜಾಗದ ವಿಸ್ತೀರ್ಣ ನೋಡಿಕೊಂಡು ಮಂಜೂರಾತಿ ನೀಡಲಾಗುವುದು. ಅರ್ಜಿದಾರರಿಗೆ ಯಾರಾದರೂ ತಪ್ಪು ತಿಳಿವಳಿಕೆ ನೀಡಿದಲ್ಲಿ ನಂಬಬೇಡಿ, ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪುರಸಭೆ ಹಾಗೂ ಆಶ್ರಯ ಸಮಿತಿ ಬದ್ಧವಾಗಿದೆ ಎಂದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾಸಾಬ್ ಎರೆಸೀಮೆ ಮಾತನಾಡಿ, ಸ್ಥಳೀಯ ಶಾಸಕರು ಹಾಗೂ ಪುರಸಭೆ ಸದಸ್ಯರ ಸಹಕಾರದಿಂದ ಶೀಘ್ರದಲ್ಲೆ ನಿವೇಶನ ವಿತರಣೆ ಮಾಡಲು ಸಮಿತಿ ಕಾರ್ಯೋನ್ಮುಖವಾಗಿದೆ. ಈ ಹಿಂದೆ ಹಣ ತುಂಬಿದವರ ಹಣ ವಾಪಸ್ ನೀಡಲು ಸಮಿತಿ ನಿರ್ಧರಿಸಿದೆ. ಇನ್ಮುಂದೆ ನಿವೇಶನಕ್ಕಾಗಿ ಯಾರೂ ಹಣ ತುಂಬಬೇಡಿ, ಆಯ್ಕೆಗೊಂಡ ಫಲಾನುಭವಿಗಳಿಗೆ ಪುರಸಭೆಯಿಂದ ಉಚಿತವಾಗಿ ನಿವೇಶನ ನೀಡಲಾಗುವುದು. ಅರ್ಹ ಕುಟುಂಬಗಳಿಗೆ ಮಾತ್ರ ನಿವೇಶನ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಆಶ್ರಯ ಸಮಿತಿ ಸದಸ್ಯರಾದ ಗಿರೀಶ ಇಂಡಿಮಠ, ದುರುಗೇಶ ಗೋಣೆಮ್ಮನವರ, ಅಬ್ದುಲ್ವುಜೀದ್ ಮುಲ್ಲಾ, ಲಕ್ಷ್ಮೀ ಬಂಬಲಾಪುರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಇತರರಿದ್ದರು.