

ವಿಜಯವಾಣಿ ಸುದ್ದಿಜಾಲ ಧಾರವಾಡ
ವಕ್ಫ ಆಸ್ತಿ ಕುರಿತು ನಮ್ಮ ಸರ್ಕಾರ ಜಿಲ್ಲೆಯ ಜನರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ. ಹಿಂದಿನ ಸರ್ಕಾರ ನೋಟಿಸ್ ಜಾರಿ ಮಾಡಿರುವ ಕುರಿತು ಈಗ ಮಾಹಿತಿ ಬಂದಿದೆ. ಈ ವಿಚಾರವಾಗಿ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್ ನೀಡಿರುವ ವಿಚಾರವಾಗಿ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಚರ್ಚೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಕಬಳಿಕೆ ಆಗಿದೆ. ಹೀಗಾಗಿ ನೋಟಿಸ್ ಜಾರಿಯಾಗಿದೆ. ಆದರೆ ಯಾರು ಮಾಡಿದ್ದಾರೆ? ಯಾವಾಗ ಮಾಡಿದ್ದಾರೆ ? ಎಂದು ಗೊತ್ತಿಲ್ಲ. ಹೀಗಾಗಿ ಸಭೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದೇನೆ.
ಸಾರಿಗೆ ಇಲಾಖೆಯಿಂದ ಇನ್ನು 2-3 ತಿಂಗಳಲ್ಲಿ ಹೊಸ ಬಸ್ಗಳನ್ನು ನೀಡಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಸ್ಗಳ ಕೊರತೆ ಉಂಟಾಗುವುದಿಲ್ಲ ಎಂದ ಅವರು, ಉಪ ಚುನಾವಣೆಯಲ್ಲಿ ಸೊಂಡೂರಿನಲ್ಲಿ ನಾನು ಪ್ರಚಾರ ನಡೆಸುತ್ತಿದ್ದೇನೆ. ಆ ಕ್ಷೇತ್ರ ಸೇರಿ ಎಲ್ಲ ಕಡೆಗಳಲ್ಲಿ ಉತ್ತಮ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.