ಅನಧಿಕೃತ ಫ್ಲೆಕ್ಸ್ ಹಾಕುವವರ ಮೇಲೆ ಎಫ್​ಐಆರ್ ದಾಖಲಿಸಸಲು ಸೂಚನೆ

palike meeting
Published on

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರ ವಿರುದ್ಧ ಎಫ್​ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ಬಿಬಿಎಂಪಿಯ ವಿವಿಧ ವಿಷಯಗಳ ಕುರಿತು ಸಂಸ್ಥೇಯ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್‌ಗಳ ಸಂಖ್ಯೆ ಹೆಚ್ಚಾಗಿದೆ. ಸ್ವತ: ಡಿಸಿಎಂ ಕೆಲವೆಡೆ ಫ್ಲೆಕ್ಸ್ ಅಳವಡಿಸಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಜತೆಗೆ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪಶ್ಚಿಮ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಫ್ಲೆಕ್ಸ್ ಅಳವಡಿಸಿರುವವರಿಂದಲೇ ವಸೂಲಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

12 ಎಫ್​ಐಆರ್ ದಾಖಲು, 12 ಲಕ್ಷ ರೂ. ದಂಡ:

ಪಾಲಿಕೆಯ ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿ ಮೂರೂ ವಲಯಗಳು ಸೇರಿ ಭಾನುವಾರ ಹಾಗೂ ಸೋಮವಾರ 1,350ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. 600ಕ್ಕೂ ಅಧಿಕ ಸಂಖ್ಯೆಯ ರಾಜಕೀಯ ಪಕ್ಷಗಳ ಧ್ವಜಗಳನ್ನು ತೆಗೆಯಲಾಗಿದೆ. ಇದುವರೆಗೂ 12 ಎಫ್​ಐಆರ್ ದಾಖಲಿಸಿದ್ದು, ಒಟ್ಟು 12 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜಕಾಲುವೆಗಳಲ್ಲಿ ಕಸ ಹಾಕದಂತೆ ನಿಗಾ ಇಡಿ:

ರಾಜಕಾಲುವೆ ಪಕ್ಕದಲ್ಲಿ ಬರುವ ಮನೆಗಳು ಹಾಗೂ ಕೊಳಗೇರಿ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ ಕೆಲಸವನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ತ್ಯಾಜ್ಯ ಬಿಸಾಡದಂತೆ ಜಾಗೃತಿ ಮೂಡಿಸವ ಕೆಲಸ ಮಾಡಬೇಕು. ಕಸ ಬಿಸಾಡುವ ಸ್ಥಳಗಳನ್ನು ಗುರುತಿಸಿ ಮಾರ್ಷಲ್‌ಗಳನ್ನು ನಿಯೋಜಿಸಬೇಕು. ಹೆಚ್ಚು ತ್ಯಾಜ್ಯ ಬರುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಟ್ರ್ಯಾಶ್ ಬ್ಯಾರಿಯರ್ಸ್ ಅಳವಡಿಸಬೇಕು. ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಿ:

ನಗರದಲ್ಲಿ ಪ್ರಸ್ತುತ ಗುರುತಿಸಿರುವಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಮಗಾರಿ ನಡೆಯುತ್ತಿದ್ದರೆ ಮಳೆಗಾಲ ಪ್ರಾರಂಭವಾಗುವ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ಅರ್ಚನಾ, ರಮ್ಯಾ, ಕರೀಗೌಡ, ದಿಗ್ವಿಜಯ್ ಬೋಡ್ಕೆ, ರಮೇಶ್, ಪ್ರಧಾನ ಅಭಿಯಂತರ ಪ್ರಹ್ಲಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net