

ಬೆಂಗಳೂರು: ಮಹಾನಗರದಲ್ಲಿ ಕಂಡುಬಂದಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಕೋಲ್ಡ್ ಮಿಕ್ಸ್ ಹಾಗೂ ಇಕೋ ಫಿಕ್ಸ್ ಬಳಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಈ ಸೂಚನೆಯನ್ನು ನೀಡಿದರು.
ನಗರದಲ್ಲಿ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆ ಇರುವ ಹಿನ್ನೆಲೆ ಇಕೋ ಫಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಮಿಶ್ರಣ ಬಳಸಿಕೊಂಡು ಗುಂಡಿಗಳನ್ನು ಮುಚ್ಚಬೇಕು. ಎಲ್ಲ 8 ವಲಯಗಳಲ್ಲಿ ಸ್ಥಳಿಯ ಗುತ್ತಿಗೆದಾರರ ಮೂಲಕ ಅಗತ್ಯ ಡಾಂಬರು ಪಡೆದು ಕಾರ್ಯನಿರ್ವಹಿಸಬೇಕು. ಜತೆಗೆ ರಸ್ತೆಗುಂಡಿ ಮುಚ್ಚುವ ವರದಿಯನ್ನು ನಿತ್ಯವೂ ಒದಗಿಸುವಂತೆ ನಿರ್ದೇಶಿಸಿದರು.
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ 690 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳಿಗೆ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ತ್ವರಿತಗತಿಯಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಪೂರ್ಣಗೊಳಿಸಲು ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.
82 ಸ್ಥಳಗಳಲ್ಲಿ ಸಮಸ್ಯೆ ಗುರುತು:
ನಗರದಲ್ಲಿ ಮಳೆಗಾಲದ ವೇಳೆ 82 ಕಡೆಗಳಲ್ಲಿ ರಸ್ತೆಯ ಮೇಲೆ ನೀರು ನಿಂತು ಸಂಚಾರ ಸಿಕ್ಕು ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ನೀರು ನಿಲ್ಲದಂತೆ ಕಾಮಗಾರಿ ಕೈಗೊಂಡು ಸೈಡ್ ಡ್ರೈನ್‌ಗಳಿಗೆ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್ ಕುಮಾರ್, ಸುರೋಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ನವೀನ್ ಕುಮಾರ್ ರಾಜು, ಎಲ್ಲ ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಹಾಜರಿದ್ದರು.
ಪ್ರವಾಹಪೀಡಿತ ಸ್ಥಳಗಳ ಮೇಲೆ ನಿಗಾ ಇಡಿ:
ಪಾಲಿಕೆ ವ್ಯಾಪ್ತಿಯಲ್ಲಿ 44 ಕಡೆಗಳಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ತಾತ್ಕಾಲಿಕ ಕ್ರಮ ಕೈಗೊಳ್ಳುವ ಜತೆಗೆ ಶಾಶ್ವತ ಪರಿಹಾರಕ್ಕೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಮಳೆಗಾಲದ ವೇಳೆ ಪ್ರವಾಹಪೀಡಿತ ಪ್ರದೇಶ ಹಾಗೂ ರಸ್ತೆಗಳಲ್ಲಿ ಜಲಾವೃತವಾಗುವ ಸ್ಥಳಗಳಿಗೆ ಮೊದಲ ಆದ್ಯತೆ ನೀಡಬೇಕು. ಆ ಸ್ಥಳಗಳಲ್ಲಿರುವ ಸಮಸ್ಯೆ ಇತ್ಯರ್ಥಪಡಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು.
- ಎಂ.ಮಹೇಶ್ವರ್ ರಾವ್, ಬಿಬಿಎಂಪಿ ಮುಖ್ಯ ಆಯುಕ್ತ