ಅನುದಾನ ಸಮರ್ಪಕ ಬಳಕೆಗೆ ಸೂಚನೆ

Instructions for proper utilization of grant
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿದರು. ನಿಂಗಪ್ಪ ಗೋಠೆ, ರಾಮಣ್ಣ ಅಥಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಅನುದಾನವನ್ನು ಲ್ಯಾಪ್ಸ್ ಆಗದಂತೆ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ 2024-25 ನೇ ಸಾಲಿನ ವಿಶೇಷ ಘಟಕ ಯೋಜನೆಯ ಹಾಗೂ ಗಿರಿಜನ ಉಪ ಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಆಗಸ್ಟ್-2024 ರ ಮಾಹೆಯ ಅಂತ್ಯದವರೆಗೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಅವರು ಸದ್ಯ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ಸೂಚಿಸಿ, ಇನ್ನುಳಿದ ಬಾಕಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಂತರ ನಡೆದ ಮ್ಯಾನುವಲ್ ಸ್ಕಾೃವೆಂಜರ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ-2013 ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯ ಎಲ್ಲ ಪೌರ ಕಾರ್ಮಿಕರಿಗೆ ವಸತಿ, ಆರೋಗ್ಯ ಹಾಗೂ ಸುರಕ್ಷಾ ಕವಚಗಳನ್ನು ಒದಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಹೇಳಿದರು.

ಮ್ಯಾನ್ಯುವಲ್ ಸ್ಕಾೃವೆಂಜರ್‌ಗಳ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2013 ಅನ್ವಯ ಜಿಲ್ಲಾ ಮಟ್ಟದ 3ನೇ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ನೇಮಕಾತಿ ಸಂದರ್ಭದಲ್ಲಿ ಬೇಕಾದ ಪ್ರಮಾಣ ಪತ್ರ ನೀಡಿಕೆ ವಿಳಂಬವಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಪರಿಶೀಲಿಸಿ ಪೌರ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹೊರಗುತ್ತಿಗೆ ಆಧಾರದಲ್ಲಿರುವ ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಇಪಿಎಫ್, ಇಎಸ್‌ಐ ಕಟಾವು ಕುರಿತು ನಿಯತಮಿತವಾಗಿ ಪರಿಶೀಲಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರಿಂದ ನಡೆಸಬೇಕು. ಎಲ್ಲ ಪೌರ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಸಮರ್ಪಕವಾಗಿ ಒದಗಿಸುವ ಜತೆಗೆ ಬಳಸುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಿ ಅಲ್ಲಿ ಅವರಿಗೆ ಎಲ್ಲ ಮೂಲ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

ಜಿಲ್ಲೆಯ ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು, ಮುಖ್ಯ ಅಡುಗೆದಾರರು, ಅಡುಗೆ ಸಹಾಯಕರು, ವಾರ್ಡನ್‌ಗಳು ಸೇರಿದಂತೆ ಹೊರಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವವರಿಗೆ ಆರೋಗ್ಯ ವಿಮೆ ಯೋಜನೆ ಸೌಲಭ್ಯ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ, ಪುರಸಭೆಯ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net