

ಧಾರವಾಡ: ಬೆಂಬಲ ಬೆಲೆ ಯೋಜನೆಯಡಿ ಹೆಸರು ನೋಂದಣಿಗೆ ರೈತರಿಂದ ಹಣ ವಸೂಲಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತಹಸೀಲ್ದಾರ್ ಡಿ.ಎಚ್. ಹೂಗಾರ ಭೇಟಿ ನೀಡಿ, ಪರಿಶೀಲಿಸಿದರು.
ಸಂಘದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರಲ್ಲದೆ, ಸಂಘದ ಸಭಾಂಗಣದಲ್ಲಿ ಸಭೆ ನಡೆಸಿ, ರೈತರಿಂದ ಮಾಹಿತಿ ಪಡೆದರು.
ನೋಂದಣಿಗೆ ರೈತರಿಂದ ಅನಧಿಕೃತವಾಗಿ ಹಣ ವಸೂಲು ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ವಿಷಯ ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಘದ ಅಭಿವೃದ್ಧಿ ನಿಧಿ ಹಾಗೂ ಕಟ್ಟಡ ಭವಿಷ್ಯತ್ ನಿಧಿಗೆ 100 ರೂ. ಶುಲ್ಕ ವಿಧಿಸಿ ರಸೀದಿ ನೀಡಿರುವ ಬಗ್ಗೆ ದಾಖಲೆಗಳಿವೆ. ಇನ್ನುಮುಂದೆ ರೈತರಿಂದ ಕಾಳು ಖರೀದಿಗೆ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಶುಲ್ಕ ತೆಗೆದುಕೊಳ್ಳುವುದನ್ನು ಈ ಕೂಡಲೇ ನಿಲ್ಲಿಸಬೇಕು. ರೈತರಿಂದ ಹಣ ಪಡೆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ವೇಳೆ ಕೆಲ ರೈತರು ಸಂಘದ ಅಭಿವೃದ್ಧಿ ದೃಷ್ಟಿಯಿಂದ ಮಾತ್ರ ಹಣ ಪಡೆದಿದ್ದಾರೆ. ಕಳೆದ 7 ವರ್ಷಗಳ ಹಿಂದೆ ಅವನತಿಯತ್ತ ಸಾಗಿದ್ದ ಸಂಘವನ್ನು ಈಗಿನ ಆಡಳಿತ ಮಂಡಳಿ ಅಭಿವೃದ್ಧಿ ಮಾಡಿ ಲಾಭದತ್ತ ಕೊಂಡ್ಯೊಯ್ದಿದ್ದಾರೆ ಎಂದರು.
ಸಂಘದ ನಿರ್ದೇಶಕರಾದ ಕಲ್ಲಯ್ಯ ವಿಭೂತಿಮಠ, ಚಂದ್ರನಾಥ ಅಷ್ಟಗಿ, ಧರೆಪ್ಪ ಬೊಬ್ಬಿ, ಈರಣ್ಣ ಮಡಿವಾಳರ, ಧರಣೇಂದ್ರ ಅಷ್ಟಗಿ, ಚಂದ್ರಶೇಖರ ಅರಳಿಕಟ್ಟಿ ರುದ್ರಪ್ಪ ಮಸೂತಿ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಕಂದಾಯ ನಿರೀಕ್ಷಕ ವಾಸಿಂ ಜಾಗಿರದಾರ, ಕೃಷಿ ಮತ್ತು ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ವಿರೂಪಾಕ್ಷಪ್ಪ ಲಮಾಣಿ, ರೇಖಾ ಬೆಳ್ಳಟ್ಟಿ, ಗ್ರಾಮ ಆಡಳಿತಾಧಿಕಾರಿ ಚೈತನ್ಯ ಮಳಿಯೆ, ವಿರೂಪಾಕ್ಷಪ್ಪ ಬೆಳವಡಿ, ಬಸಯ್ಯ ಚಿಕ್ಕಮಠ, ಸಂಘದ ಸದಸ್ಯರು ಹಾಗೂ ರೈತರು, ಸಿಬ್ಬಂದಿ ಇದ್ದರು.