ಬಾಕಿ ಅರ್ಜಿಗಳ ವಿಲೇವಾರಿಗೆ ಸೂಚನೆ

5 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಉತ್ತಮ ರೀತಿ ಅನುಷ್ಠಾನವಾಗುತ್ತಿವೆ. ಯುವನಿಧಿ, ಗೃಹಲಕ್ಷ್ಮೀ ಯೋಜನೆಯ ಬಾಕಿ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ, ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಸ್​.ಆರ್​. ಪಾಟೀಲ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಜಾಗೃತಿ ವಹಿಸಬೇಕು. ನ್ಯಾಯ ಬೆಲೆ ಅಂಗಡಿಯವರು ಅನ್ನಭಾಗ್ಯ ಯೋಜನೆಯಡಿಯ ಸೌಲಭ್ಯಗಳ ಬಗ್ಗೆ ಸರ್ಕಾರದ ಮಾಹಿತಿ ಫಲಕಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಪಡಿತರ ಚೀಟಿ ಹೊಂದಿದ ಅಂಗವಿಕಲರು ಹಾಗೂ ವೃದ್ಧರಿಗೆ ಮನೆಗೆ ಹೋಗಿ ಅಕ್ಕಿ ನೀಡಬೇಕು. ಗ್ರಾಮಗಳಲ್ಲಿ ಒಂದು ವಾರದವರೆಗೆ ಬಾಕಿ ಉಳಿದ ಅಕ್ಕಿ ವಿತರಿಸಲು ಸೂಚಿಸಿದರು.

ಗೃಹಜ್ಯೋತಿ ಯೋಜನೆಯಡಿ ಮಾರ್ಚ್​ ತಿಂಗಳಲ್ಲಿ ಮಳೆ ಆದ ಕಾರಣ ವಿದ್ಯುತ್​ ತಂತಿಗಳು ತುಂಡಾಗಿದ್ದಲ್ಲಿ ಅವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬಾಕಿ ಇರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಯೋಜನೆಗಳ ಪ್ರಗತಿ ಕುರಿತು ಮಾಹಿತಿ ಪಡೆದರು. ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ಅರವಿಂದ ಏಗನಗೌಡರ, ಅಬ್ದುಲ್​ ರಸೀದ ಬೋಳಾಯಿ, ರತ್ನಾ ತೇಗೂರಮಠ, ಸದಸ್ಯರು, ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ಜಿಪಂ ಉಪ ಕಾರ್ಯದರ್ಶಿ ಬಿ.ಎಸ್​. ಮೂಗನೂರಮಠ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net