

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಶನಿವಾರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಬಾಲಭವನ ಕಟ್ಟಡ, ಉದ್ಯಾನವನ ಹಾಗೂ ಬಾಲಭವನದ ಇತರ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ನಂತರ ಜಿಲ್ಲಾ ಬಾಲಭವನದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪ್ರಸಕ್ತ ಕಾಲಘಟ್ಟದಲ್ಲಿ ಮಕ್ಕಳು ಮೋಬೈಲ್ನಂತಹ ವಿದ್ಯುನ್ಮಾನ ಸಾಧನಗಳಲ್ಲಿ ಕಳೆದು ಹೋಗಿದ್ದು, ಅವರ ಕೋಮಲ ಮನಸ್ಸು, ಬಾಲ್ಯದ ಜೀವನ ಅವರಿಗೆ ಅರಿವಿಲ್ಲದೆ ಹಾಳಾಗಲು ಒಂದು ರೀತಿ ಎಲ್ಲರೂ ಕಾರಣರಾಗುತ್ತಿದ್ದೇವೆ. ಪಾಲಕರು ಹಾಗೂ ಜನರ ಸಹಭಾಗಿತ್ವದಲ್ಲಿ ಸರ್ಕಾರದ ಅನುದಾನ ಬಳಸಿ ವರ್ಷವಿಡೀ ಮಕ್ಕಳ ಚಟುವಟಿಕೆಗಳು ನಡೆಯುಸುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಅವಶ್ಯವಿರುವ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಿದಲ್ಲಿ ಸೊಸೈಟಿಯಿಂದ ಅಗತ್ಯ ಅನುದಾನ ಹಾಗೂ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಬಾಲಭವನ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತಣ್ಣ ಸಿ.ಎ. ವಂದಿಸಿದರು.