ಶಾಲೆಗಳಲ್ಲಿ ಮಕ್ಕಳ ಕುಂದುಕೊರತೆ ಆಲಿಸಿ

25 HRR 2
Published on

ಹರಿಹರ: ಮಕ್ಕಳ ಸಂರಕ್ಷಣೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣ ಎಂ. ಕೊಳ್ಳ ಹೇಳಿದರು.

ನಗರದ ಗುರುಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆ ತರಬೇತಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕುಂದುಕೊರತೆ ಆಲಿಸಬೇಕು. ಅಲ್ಲದೆ ಬಾಲ್ಯವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ 112/1098 ಸಂಖ್ಯೆ ಬರೆಸಬೇಕು. ತಾಲೂಕು ದಂಡಾಧಿಕಾರಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಟಿಸಿಪಿಸಿ ಸಮಿತಿ ರಚಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದರು.

ನ್ಯಾಯಾಧೀಶೆ ಪದ್ಮಶ್ರೀ ಮುನ್ನೋಳಿ ಮಾತನಾಡಿ, ಪಾಲಕರು ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಬೇಕು. ಶಾಲೆಗಳಲ್ಲಿ ಮಕ್ಕಳೊಂದಿಗೆ ನಿರಂತರ ಆಪ್ತ ಸಮಾಲೋಚನೆ ಹಾಗೂ ಮಕ್ಕಳ ಕಾಯ್ದೆ ಅನುಷ್ಠಾನ ಮತ್ತು ಅರಿವು ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.

ತಹಸೀಲ್ದಾರ್ ಗುರುಬಸವರಾಜ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ಬಾಲ್ಯವಿವಾಹ ಪ್ರಕರಣ ಕಂಡುಬರುತ್ತಿವೆ. ಬರುವ ದಿನಗಳಲ್ಲಿ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ನಗರದಲ್ಲಿ ಶಾಲೆಗಳ ಆರಂಭ ಮತ್ತು ಬಿಡುವ ಸಮಯದಲ್ಲಿ ಪೊಲೀಸ್ ನಿಯೋಜನೆ ಮಾಡಬೇಕು ಮತ್ತು ವಿದ್ಯಾರ್ಥಿಗಳ ಮೇಲೆ ನಿಗಾವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಸಂಪನ್ಮೂಲ ವ್ಯಕ್ತಿ ಬಿ.ಎಸ್.ಪ್ರಕಾಶ್ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿದರೆ, ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಅತಿಥಿಗಳು ಉತ್ತರ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದಾವಣಗೆರೆ ರಕ್ಷಣಾಧಿಕಾರಿ ಟಿ.ಎನ್.ಕವಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವೀರೇಶ್, ಸಿಡಿಪಿಒ ಪೂರ್ಣಿಮಾ, ಟಿಎಚ್​ಒ ಡಾ.ಅಬ್ದುಲ್ ಖಾದರ್ ಇತರರಿದ್ದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net