

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಲ್ಲ ಸಚಿವರು ಒಟ್ಟಾಗಿ ಕೆಲಸ ಮಾಡುವಂತೆ ರಾಷ್ಟ್ರ ನಾಯಕರು ಸೂಚಿಸಿದ್ದು, ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಸಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ನಡುವೆ ಯಾವ ರೀತಿ ಬಾಂಧವ್ಯ ಇರಬೇಕು ಎನ್ನುವುದನ್ನು ತಿಳಿಸಿರುವ ಹೈಕಮಾಂಡ್, ಲೋಕಸಭಾ ಚುನಾವಣೆ ಎದುರಿಸುವ ಕುರಿತು ತಿಳಿಸಿದ್ದಾರೆ. ಡಿಸಿಎಂ ನೇಮಕ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಿಗಮ ಮಂಡಳಿಗಳಿಗೆ ಕಾರ್ಯಕರ್ತರು ಮತ್ತು ಶಾಸಕರನ್ನು ಆಯ್ಕೆ ಮಾಡುವ ಕುರಿತು ತೀರ್ಮಾನ ಮಾಡಲಾಗಿದೆ. ಶೀಘ್ರದಲ್ಲಿ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದರು.
ನೂತನ ಗ್ರಾಚ್ಯುಟಿ ಕಾನೂನಿನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಲಾಡ್, ಗ್ರಾಚ್ಯುಟಿ ಇನ್ಸುರೆನ್ಸ್ ಎನ್ನುವುದು ಯಾವ ಕಂಪನಿಯಲ್ಲಿ 10 ಜನಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಿರುವವರು ಇದಕ್ಕೆ ಒಳಪಡುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಿಟ್ಟು ಎಲ್ಲ ಖಾಸಗಿ ಕಂಪನಿ ಕೆಲಸಗಾರರು ಇದಕ್ಕೆ ಒಳಪಡುತ್ತಾರೆ. ಕಡ್ಡಾಯವಾಗಿ ಅವರು ಇನ್ಸುರೆನ್ಸ್ ಮಾಡಿಸಿಕೊಳ್ಳಬೇಕು ಎಂಬ ಕಾನೂನಿದೆ. ಕಂಪನಿ ಲಾಸ್ ಆದಾಗ ಗ್ರಾಚ್ಯುಟಿ ಸಿಗುತ್ತಿರಲ್ಲ. ಕೆಲ ಕಂಪನಿಗಳು ಕೆಲಸಗಾರರನ್ನು ಕೆಲಸದಿಂದ ತೆಗೆದಾಗ ಗ್ರಾಚ್ಯುಟಿ ಸಿಗುತ್ತಿರಲಿಲ್ಲ. ಈಗ ಕಡ್ಡಾಯವಾಗಿ ಅವರಿಗೆ ನೇರವಾಗಿ ಇನ್ನುರೆನ್ಸ್ ಕಂಪೆನಿಯಿಂದ ದುಡ್ಡು ಹೋಗುತ್ತದೆ. ಇದರಿಂದ ಕಾರ್ಮಿಕರಿಗೆ ನೆರೆವಾಗಲಿದೆ ಎಂದರು.