ಕ್ರಿಯಾಯೋಜನೆ ಬದಲು ವರದಿ ಸಲ್ಲಿಸಲು ಸೂಚನೆ: ಸಚಿವ ಪ್ರಿಯಾಂಕ್ ಖರ್ಗೆ ಆದೇಶ

Instruction to submit report instead of action plan Mandya
Published on

ಮಂಡ್ಯ: ಮದ್ದೂರು ತಾಲೂಕಿನ 42 ಗ್ರಾಮ ಪಂಚಾಯಿತಿಯ ವಾರ್ಡ್ ಸಭೆ, ಗ್ರಾಮಸಭೆ, ಗ್ರಾಪಂ ಸಭೆಗಳಲ್ಲಿ ಚರ್ಚಿಸಿ ನಿರ್ಣಯಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ಬದಲಿಸುತ್ತಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ.

ಅಧಿಕಾರಿಗಳ ನಿಲುವು ಖಂಡಿಸಿ ಮದ್ದೂರು ತಾಲೂಕು ವಿವಿಧ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಈ ಕುರಿತು ಮದ್ದೂರು ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಅಂತೆಯೇ ಮದ್ದೂರು ಗ್ರಾಪಂ ಸದಸ್ಯರ ಒಕ್ಕೂಟದ ಮನವಿಯನ್ನು ಪರಿಗಣಿಸಬೇಕು ಎಂದು ವಿನಂತಿಸಿದರು.

ಅಲ್ಲದೆ, ಈ ವರ್ಷದ ನರೇಗಾ ಕ್ರಿಯಾ ಯೋಜನೆಯ ಕಾಮಗಾರಿಯನ್ನು 60:40 ಸರಾಸರಿಯಲ್ಲಿ ಇರುವ ಪಂಚಾಯಿತಿಯ ಕಾಮಗಾರಿ ಚಾಲ್ತಿಗೊಳಿಸಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಸಚಿವ ಸೂಚನೆ ನೀಡಿದ್ದಾರೆ.

ಶಾಸಕರ ಮನವಿಯಲ್ಲೇನಿದೆ?: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಗ್ರಾಮ ಸಭೆಗಳ ಪ್ರಕರಣ 3ರಲ್ಲಿ ತಿಳಿಸಿರುವಂತೆ ಗ್ರಾಪಂನ ಪ್ರತಿ ಆರ್ಥಿಕ ವರ್ಷದಲ್ಲಿ ಎರಡು ಬಾರಿ ಎಂದರೆ, ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮ ಸಭೆ ಆಯೋಜನೆ ಮಾಡಬೇಕು. ಜನರನ್ನ ಸೇರಿಸಿ, ಆ ಗ್ರಾಮಗಳ ಸಮಸ್ಯೆಗಳು ಮತ್ತೆ ಬೇಡಿಕೆಗಳನ್ನು ಪಟ್ಟಿ ಮಾಡಿ ಅವುಗಳ ಆಧಾರದ ಮೇಲೆ ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅನಿಯಮದ 2025-26ನೇ ಸಾಲಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ಮದ್ದೂರು ತಾಲೂಕಿನ 42 ಗ್ರಾಪಂಗಳು ಜನವರಿ ಅಂತ್ಯದಲ್ಲಿ ರಚಿಸಿ ತಾಪಂ ತಂತ್ರಾಂಶದ ಮೂಲಕ ಕಳಿಸಿದ್ದವು. ಅದರಂತೆ 42 ಗ್ರಾಪಂನ ಒಟ್ಟಾರೆ ಕ್ರಿಯಾ ಯೋಜನೆಯ ಮೊತ್ತ 187 ಕೋಟಿ ರೂ ಆಗಿದೆ ಎಂದಿದ್ದಾರೆ.

ಆದರೆ, ತಾಪಂ ಇಒ ಹಾಗೂ ಜಿಪಂ ಸಿಇಒ ಸರ್ಕಾರದ ಯಾವುದೇ ಅಧಿಕೃತ ಆದೇಶ ಮತ್ತು ಸುತ್ತೋಲೆ ಇಲ್ಲದೇ ತಂತ್ರಾಂಶದಲ್ಲಿರುವಂತಹ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿದ್ದಾಗಿ ತಿಳಿದುಬಂದಿದೆ. ಪುನಃ ಕ್ರಿಯಾಯೋಜನೆಯನ್ನು ತಯಾರಿಸಲು ಮೌಖಿಕವಾಗಿ ತಿಳಿಸಿದ್ದಾರೆ. ಈ ಸಂಬಂಧ ಗ್ರಾಪಂ ಪಿಡಿಒಗಳು ವಾರ್ಡ್ ಸಭೆ ಮತ್ತು ಗ್ರಾಮ ಸಭೆ, ಪಂಚಾಯತಿ ಸಭೆ ಆಯೋಜನೆ ಮಾಡದೆ, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ತಮಗೆ ಬೇಕಾದ ರೀತಿ ಕಾಮಗಾರಿಯ ಕ್ರಿಯಾ ಯೋಜನೆ ಬದಲಾಯಿಸಿದ್ದಾರೆ. ಮದ್ದೂರು ತಾಲೂಕಿನ 187 ಕೋಟಿ ರೂ ಕ್ರಿಯಾ ಯೋಜನೆಯನ್ನು 57 ಕೋಟಿ ರೂ.ಗೆ ಸೀಮಿತಗೊಳಿಸಿದ್ದಾರೆ. ಸುಮಾರು 130 ಕೋಟಿ ರೂ ಮೊತ್ತದ ಕಾಮಗಾರಿ ಕ್ರಿಯಾಯೋಜನೆಯನ್ನು ಕೈಬಿಟ್ಟು ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ ಎಂದು ಶಾಸಕರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net