ವಿದ್ಯಾರ್ಥಿಗಳಿಗೆ ಶುಚಿ-ರುಚಿ ಆಹಾರ ಒದಗಿಸಲು ಸೂಚನೆ

MUNDARAGI
ಮುಂಡರಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಮಂಗಳವಾರ ರಾಜ್ಯ ಮಾನವ ಹಕ್ಕುಗಳ ಸದಸ್ಯರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಧನಂಜಯ ಎಂ, ಉದಯಕುಮಾರ ಯಲಿವಾಳ ಇತರರಿದ್ದರು.
Published on

ಮುಂಡರಗಿ: ರಾಜ್ಯ ಮಾನವ ಹಕ್ಕುಗಳ ಸದಸ್ಯರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಅವರು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹೆಸರೂರ ರಸ್ತೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ, ನಿಲಯಕ್ಕೆ ತಡೆಗೋಡೆ ಅತೀ ಅವಶ್ಯವಾಗಿದೆ. ನಿಲಯಕ್ಕೆ ತ್ವರಿತವಾಗಿ ಸಿ.ಸಿ..ಕ್ಯಾಮರಾಗಳನ್ನು ಅಳವಡಿಸುವಂತೆ ವಾರ್ಡನ್‌ಗೆ ಸೂಚಿಸಿದರು.

ಹೆಸರೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದರು. ಸೊಳ್ಳೆ ತಡೆಗೆ ಕಿಟಕಿಗಳಿಗೆ ಪರದೆ ಅಳವಡಿಸಲು ಹಾಗೂ ಕಟ್ಟಡಕ್ಕೆ ಕೂಡಲೆ ಬಣ್ಣ ಹಚ್ಚಲು ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೌಲಭ್ಯಗಳ ಕುರಿತು ವಿಚಾರಿಸಿದರು. ವಿದ್ಯಾರ್ಥಿಗಳಿಗೆ ಶುಚಿ-ರುಚಿ ಆಹಾರ ಒದಗಿಸಲು ಸೂಚಿಸಿದರು. ಗದಗ ರಸ್ತೆಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಯ 10ನೇ ತರಗತಿ ಪಾಠ ನಡೆಯುತ್ತಿದ್ದ ಕ್ಲಾಸ್‌ನ ಮಕ್ಕಳೊಡನೆ ಸೌಲಭ್ಯಗಳ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು. ಮಕ್ಕಳು, ‘ವಸತಿ ಶಾಲೆ ಮತ್ತು ವಸತಿ ನಿಲಯದ ಸ್ವಂತ ಕಟ್ಟಡವಿಲ್ಲದೆ ನಮಗೆ ತುಂಬಾ ಸಮಸ್ಯೆಯಾಗಿದೆ’ ಎಂದು ಸಮಸ್ಯೆ ಹೇಳಿಕೊಂಡರು. ಊಟ-ಉಪಹಾರದ ಬಗ್ಗೆ ಮಕ್ಕಳಿಂದ ದೂರುಗಳು ಕೇಳಿಬಂದಾಗ ಮಾನವ ಹಕ್ಕುಗಳ ಸದಸ್ಯರು ವಾರ್ಡನ್ ಮತ್ತು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡ ನಿರ್ಮಾಣದ ಬಗ್ಗೆ ಇಲಾಖೆಗೆ ಪತ್ರ ಬರೆಯುವುದಾಗಿ ವಂಟಿಗೋಡಿ ಅವರು ಭರವಸೆ ನೀಡಿದರು.

ತಹಸೀಲ್ದಾರ್ ಧನಂಜಯ ಎಂ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಯೋಗಿ ಕಲ್ಮಠ, ಪಿ.ಎಸ್.ಐ ತಿ ಸುಮಾ ಗೊರಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net