ರೇಷನ್ ಕಾರ್ಡ್ ಇ-ಕೆವೈಸಿ ಮಾಡಲು ಸೂಚನೆ : 31ರೊಳಗೆ ಮಾಡದಿದ್ದರೆ ರದ್ದಾಗುವ ಸಾಧ್ಯತೆ

restion
Published on

ಕಡಬ: ಪಡಿತರ ಚೀಟಿಗೆ ಆಧಾರ್ ಕಾರ್ಡ್ ದೃಢೀಕರಣ ಮಾಡುವ ಇ-ಕೆವೈಸಿ ಕಡ್ಡಾಯವಾಗಿದ್ದು, ಈ ಪ್ರಕ್ರಿಯೆಗೆ ಆ.31ಕೊನೆಯ ದಿನಾಂಕವಾಗಿದೆ. ಗ್ರಾಹಕರು ತಕ್ಷಣ ಇ-ಕೆವೈಸಿ ಮಾಡಿಸುವಂತೆ ಕಡಬ ಆಹಾರ ನಿರೀಕ್ಷಕ ಶಂಕರ್ ಎಂ.ಎಲ್.ತಿಳಿಸಿದ್ದಾರೆ.

ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ. ಹಿಂದೊಮ್ಮೆ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು. ನಂತರ, ರೇಷನ್ ಕಾರ್ಡ್‌ಗೆ ಆಧಾರ್ ಜೋಡಣೆ ನಿಯಮ ತರಲಾಗಿತ್ತು. ಶೇ.100 ಆಧಾರ್ ಜೋಡಣೆಯಾಗಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಯಾಗಿತ್ತು. 2019ರಿಂದ 2022ರವರೆಗೆ ನಡೆದ ಇ-ಕೆವೈಸಿ ಪ್ರಕ್ರಿಯೆಯಲ್ಲೂ ಸತ್ತವರ ಹೆಸರಿನಲ್ಲಿ ರೇಷನ್ ಪಡೆಯುತ್ತಿರುವುದು ಬಹಿರಂಗವಾಗಿತ್ತು. ಇ-ಕೆವೈಸಿಯಿಂದ ನಕಲಿ ಕಾರ್ಡ್ ಪತ್ತೆಯಾಗುವುದಲ್ಲದೆ ಪಡಿತರ ಸೋರಿಕೆ ತಡೆಗಟ್ಟಬಹುದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಬೋಗಸ್ ಕಾರ್ಡ್ ಪತ್ತೆ ಹಾಗೂ ಪಡಿತರ ಸೋರಿಕೆ ತಡೆಗೆ ಮುಂದಾಗಿರುವ ಆಹಾರ ಇಲಾಖೆ ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಪ್ರಕ್ರಿಯೆ ಮರು ಜಾರಿಗೊಳಿಸಿದ್ದು ಈಗಾಗಲೇ ಶೆ.75 ಕಾರ್ಡ್‌ದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಈಗ ಉಳಿದ ಕುಟುಂಬಗಳು ಇ-ಕೆವೈಸಿ ಮಾಡಿಸಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇ-ಕೆವೈಸಿ ಮಾಡಿಸಬೇಕು. ಕಾರ್ಡ್‌ನಲ್ಲಿ ನಮೂದಾಗಿರುವ ಎಲ್ಲ ಸದಸ್ಯರೂ ಆಧಾರ್ ದೃಢೀಕರಣ ಮಾಡಿಸಬೇಕು ಎಂದು ಶಂಕರ್ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net