ಯುಟಿಪಿ ಮುಖ್ಯ ಕಾಲುವೆಗೆ ನೀರು ಹರಿಸಲು ಸೂಚಿಸಿ

25 rtl 1
Published on

ರಟ್ಟಿಹಳ್ಳಿ: ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಗೆ ಶೀಘ್ರ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪಟ್ಟಣದಲ್ಲಿ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ ಮತ್ತು ತಾಲೂಕು ಅಧ್ಯಕ್ಷ ಶಂಕ್ರಗೌಡ ಶಿರಗಂಬಿ ಮಾತನಾಡಿ, ತಾಲೂಕಿನಾದ್ಯಂತ ರೈತರು ಬಿತ್ತನೆ ಮುಗಿಸಿದ್ದಾರೆ. ಉತ್ತಮ ಮಳೆಯಾಗದ ಕಾರಣ ಬೆಳೆಗಳು ಒಣಗಲು ಆರಂಭಿಸಿವೆ. ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಜು. 10ರ ನಂತರ ಕಾಲುವೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ. ಕಾಲುವೆಗೆ ಶೀಘ್ರ ನೀರು ಹರಿಸಿದರೆ ಬೆಳೆಗೆ ನೀರು ಹಾಯಿಸಲು ಹಾಗೂ ಕೆರೆ ತುಂಬಿಸಲು ಅನುಕೂಲವಾತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಾಲುವೆಗೆ ನೀರು ಹರಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಇದೆ. 4-5 ದಿನಗಳಲ್ಲಿ ಉತ್ತಮ ಮಳೆಯಾಗಿ ಒಳಹರಿವು ಹೆಚ್ಚಾದರೆ ಕಾಲುವೆಗೆ ನೀರು ಬರುತ್ತದೆ ಎಂದು ತಿಳಿಸಿದ್ದಾರೆ ಎಂದರು.

ಬಸ್ ಸೌಕರ್ಯ ಕಲ್ಪಿಸಲು ಮನವಿ: ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕೆಂದು ಅಖಿಲ ಕರ್ನಾಟಕ ರೈತ ಸಂಘದಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ಬಿ.ಡಿ. ಪಾಟೀಲ, ಪೂಜಾ ಮಾಯಚಾರಿ, ಚಂದ್ರಪ್ಪ ಕುದುರಿಹಾಳ, ಕಾವ್ಯಾ ಹುಡೇದ, ಅಶೋಕ ಸಿಡಿನಾಳ, ಕಮಲ್ಲಮ್ಮ ಕುಂಬಾರ, ಗೀತಾ ಅಂಗಡಿ, ರವಿ ಮಾಳಗೇರ, ಗುತ್ತೆಮ್ಮ ಸುಣಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net