ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಬ್ಯಾಂಕ್​ಗೆ ಸೂಚನೆ

DC JANATA DARSHAN
Published on

ಬ್ಯಾಡಗಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಒಟ್ಟು 179 ಅರ್ಜಿಗಳು ಸಲ್ಲಿಕೆಯಾಗಿ, ಅದರಲ್ಲಿ 18 ವಿವಿಧ ಮಾಸಾಶನ ಅರ್ಜಿಗಳು ಇತ್ಯರ್ಥಗೊಂಡವು.

ಆರಂಭದಲ್ಲಿ ವಿಕಲಚೇತನ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಅರ್ಜಿ ಸಲ್ಲಿಸಿ, ಇಲ್ಲಿನ ಸ್ಟೇಟ್ ಬ್ಯಾಂಕ್​ನಲ್ಲಿ ಅಂಗವಿಕಲರು ಆಧಾರ ತಿದ್ದುಪಡಿ ಇತ್ಯಾದಿ ಕೆಲಸಗಳಿಗೆ ತೆರಳಿದಾಗ ಕುಳಿತುಕೊಳ್ಳಲು ಆಸನಗಳಿಲ್ಲ. ಅಲ್ಲಿನ ಸಿಬ್ಬಂದಿ ಸೌಜನ್ಯದಿಂದ ವರ್ತಿಸುವುದಿಲ್ಲ. ಸಮರ್ಪಕ ಮಾಹಿತಿಯನ್ನೂ ನೀಡುತ್ತಿಲ್ಲ. ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು.

ಸ್ಥಳದಲ್ಲಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯರನ್ನು ಕರೆಸಿದ ಜಿಲ್ಲಾಧಿಕಾರಿ, ಎರಡು ದಿನಗಳೊಳಗೆ ವ್ಯವಸ್ಥೆ ಸರಿಪಡಿಸಿ, ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ಯಾರಿಗೂ ಬ್ಯಾಂಕ್​ನಲ್ಲಿ ತೊಂದರೆ ಆಗಬಾರದು. ಮೂಲಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.

ಸೇವಾ ಪುಸ್ತಕ ಸಿಗ್ತಿಲ್ಲ:

ನಿವೃತ್ತ ನೌಕರ ಕೆ.ಎನ್. ಹುಚ್ಚೇರ ಮಾತನಾಡಿ, ಎರಡು ದಶಕಗಳಿಗೂ ಹೆಚ್ಚು ಕಾಲ ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವೆ. ಆದರೆ, ನನ್ನ ಸೇವಾ ಪುಸ್ತಕ ಬೆಂಗಳೂರಿನ ಮಹಾಪಾಲರ ಕಚೇರಿಯಲ್ಲಿ ಕಳೆದಿದೆ ಎನ್ನುತ್ತಿದ್ದಾರೆ. ಎರಡೂವರೆ ವರ್ಷದಿಂದ ನನಗೆ ನ್ಯಾಯ ಸಿಕ್ಕಿಲ್ಲ, ಸಮಸ್ಯೆಗೆ ಪರಿಹರಿಸಿ ಎಂದು ವಿನಂತಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಿವೃತ್ತ ನೌಕರರನ್ನು ಕಚೇರಿಗೆ ಓಡಾಡಿಸಬೇಡಿ. ಕೂಡಲೇ ಸಂಬಂಧಿಸಿದ ದಾಖಲಾತಿ ಸಿದ್ಧಪಡಿಸಿ, ನನಗೆ ಕಳುಹಿಸಿಕೊಡಿ. ನಾನೇ ಖುದ್ದಾಗಿ ಸಮಸ್ಯೆ ಇತ್ಯರ್ಥಪಡಿಸಲು ಬೆಂಗಳೂರು ಮಹಾಪಾಲರ ಕಚೇರಿಗೆ ಮಾತನಾಡುತ್ತೇನೆ ಎಂದು ತಹಸೀಲ್ದಾರರಿಗೆ ಸೂಚಿಸಿದರು.

ಜನತಾ ದರ್ಶನದಲ್ಲಿ ಒಟ್ಟು 179 ಅರ್ಜಿಗಳು ದಾಖಲಾಗಿದ್ದು, ಈ ಪೈಕಿ 125 ಅರ್ಜಿಗಳು ಬೆಳೆ ಹಾನಿಗೆ ಸಂಬಂಧಿಸಿದ್ದವು ಎನ್ನಲಾಗಿದೆ. ಇನ್ನುಳಿದಂತೆ ಸರ್ವೆ, ದಾರಿ ಸಮಸ್ಯೆ, ಆಧಾರ ಸಮಸ್ಯೆ, ಪಡಿತರ, ಗೃಹಲಕ್ಷ್ಮೀ ವಿವಿಧ ಬೇಡಿಕೆಗಳ ಅರ್ಜಿಗಳಿವೆ. ಇವುಗಳಲ್ಲಿ 18 ವಿವಿಧ ಮಾಸಾಶನ ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥಗೊಂಡಿವೆ ಎಂದು ತಹಸೀಲ್ದಾರ್ ಎಸ್.ಎ. ಪ್ರಸಾದ ತಿಳಿಸಿದರು.

ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್​ಪಿ ಡಾ. ಶಿವಕುಮಾರ ಗುಣಾರೆ, ಉಪವಿಭಾಗಾಧಿಕಾರಿ ವೀರಮಲ್ಲಪ್ಪ ಪೂಜಾರ, ಡಾ.ಚನ್ನಪ್ಪ ಪೂಜಾರ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ನಾಗರಾಜ, ಜಿಪಂ ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net