

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್ಡಿಎಂ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ವೃತ್ತಿಪರರಾಗುವುದರೊಂದಿಗೆ ಸಮಾಜದಲ್ಲಿ ಉತ್ತಮ ಮಾನವರಾಗಲು ಸಹಕರಿಸುತ್ತದೆ ಎಂದು ಎಸ್ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ ಕುಮಾರ್ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಔಷಧ ವಿಜ್ಞಾನ ಕಾಲೇಜ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2024-25ನೇ ವರ್ಷದ ಹೊಸ ಬ್ಯಾಚ್ನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಲಿಯುವ ಕುತೂಹಲ ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಹೊಸ ಜ್ಞಾನ ಅರಿತುಕೊಳ್ಳಲು ಕೊನೇ ಎಂಬುದು ಇಲ್ಲ. ಹೀಗಾಗಿ ಕಲಿಕೆ ನಿರಂತರ ಎಂಬುದನ್ನು ಅರಿತು ಮುನ್ನಡೆಯಬೇಕು. ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಅವರು, ಎಸ್ಡಿಎಂ ವಿಶ್ವ ವಿದ್ಯಾಲಯವು ವಿದ್ಯಾರ್ಥಿಗಳ ಜಾಗತಿಕ ಬೆಳವಣಿಗೆಯ ಗಮನ ಹರಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಶೈಲಪ್ಪ ಬದಾಮಿ ಮಾತನಾಡಿ, ಯಾವುದೇ ಔಷಧೀಯ ಸಸ್ಯಗಳನ್ನು ನಾವು ನಿರ್ಲಕ್ಷಿಸಿ ನಾಶ ಮಾಡಬಾರದು. ಭಾರತ ಔಷಧೀಯ ಉತ್ಪನ್ನಗಳ ರಫ್ತಿನಲ್ಲಿ ಮುಂಚೂಣಿಯಲ್ಲಿರಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್., ಪ್ರೊ. ಕ್ಲೆಮೆಂಟ್ ಚೆಲ್ಲಿ, ಇತರರು ಇದ್ದರು. 64 ವಿದ್ಯಾರ್ಥಿಗಳು ಗಣ್ಯರ ಸಮ್ಮುಖದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ಪೂಜಾ ನಿರೂಪಿಸಿದರು. ಅಧ್ಯಾಪಕ ದತ್ತಾತ್ರೇಯ ಪ್ರಮಾಣ ವಚನ ಬೋಧಿಸಿದರು. ಉಪ ಪ್ರಾಂಶುಪಾಲರಾದ ಡಾ. ಅನಿಲ್ ತುಮಕೂರ ವಂದಿಸಿದರು.