ಚಿಕ್ಕಂದಿನಿಂದಲೇ ಕಾಯಕದ ಅರಿವು ಮೂಡಿಸಿ

h11-cmd sir 2
Published on

ಹುಬ್ಬಳ್ಳಿ: ಸಂಸ್ಕಾರದ ಜತೆಗೆ ಕಾಯಕದ ಅರಿವು ಮಕ್ಕಳಿಗೆ ಚಿಕ್ಕಂದಿನಿಂದಲೇ ಮೂಡಿಸಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸಲಹೆ ನೀಡಿದರು.

ಇಲ್ಲಿಯ ಯಲ್ಲಾಪೂರ ಓಣಿ ದೇಸಾಯಿ ಓಣಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಬಸವಣ್ಣ ದೇವರ ದೇವಸ್ಥಾನದ ಉದ್ಘಾಟನೆ ಹಾಗೂ ರೈತ ಧರ್ಮ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕವರಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು. ಕಾಯಕದಲ್ಲಿ ಶ್ರದ್ಧೆ ಇಟ್ಟಿದ್ದರು. ಇಂಥವರು ಯುವಕರಿಗೆ ಮಾದರಿ. ಯಶಸ್ಸು ಕಂಡುಕೊಂಡವರ ಜೀವನವನ್ನು ನೋಡಿ ಕಲಿಯಬೇಕು ಎಂದರು.

ಕಷ್ಟಪಟ್ಟು ದುಡಿದರೆ ಭೂಮಿ ತಾಯಿ ಯಾವತ್ತೂ ಕೈಬಿಡುವುದಿಲ್ಲ. ಭೂಮಿಗೆ ವಿಷ ಹಾಕಿ ಬೆಳೆ ಬೆಳೆಯಬಾರದು. ಸಾವಯವ ಕೃಷಿಯತ್ತ ಲಕ್ಷೃ ಕೊಡಬೇಕು. ಕಡಿಮೆ ಖರ್ಚಿನಲ್ಲಿ ಕೋಟ್ಯಂತರ ರೂಪಾಯಿ ಬೆಳೆ ಬೆಳೆಯಬಹುದು. ನಮ್ಮ ಪತ್ರಿಕೆಯಲ್ಲಿ ರೈತರಿಗೆ ಸಂಬಂಧಿಸಿದ ಸಾವಿರಾರು ಲೇಖನಗಳನ್ನು ಪ್ರಕಟಿಸಿದ್ದು, ಬಹಳಷ್ಟು ರೈತರು ಲೇಖನ ಓದಿ ಜೀವನ ಕಂಡುಕೊಂಡಿದ್ದಾರೆ ಎಂದರು.

ವಿಜಯಪುರದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿಯೇ ಶರಣರು ಸತ್ಯವನ್ನು ಬಿತ್ತಿ ಹೋಗಿದ್ದಾರೆ. ಅದರಲ್ಲಿ ಕಾಯಕ ಮತ್ತು ದಾಸೋಹ ತತ್ವಗಳೆರಡು ಪ್ರಪಂಚದಾದ್ಯಂತ ಪಸರಿಸಿವೆ. ಪರರಿಗೆ ಅನ್ನ, ನೀರು, ಉಪಕಾರ ಮಾಡಬೇಕೆಂದಿದ್ದಾರೆ. ಹಾಗಾಗಿಯೇ ಪ್ರಪಂಚದಲ್ಲಿ ನಮ್ಮ ದೇವನು ಸುಸಂಸ್ಕೃತಿಯ ದೇಶವೆಂದು ಹೆಸರು ಮಾಡಿದೆ ಎಂದರು.

ಬೇರೆ ಯಾರನ್ನೋ ನಾವು ನಮ್ಮ ಜೀವನದಲ್ಲಿ ಹೀರೋ ಮಾಡಿಕೊಳ್ಳಬಾರದು. ಡಾ. ವಿಜಯ ಸಂಕೇಶ್ವರ ಅವರಂಥವರನ್ನು ಹೀರೋ ಆಗಿ ಸ್ವೀಕರಿಸಬೇಕು. ಒಂದು ಲಾರಿಯಿಂದ ಇಂದು 8 ಸಾವಿರ ವಾಹನಗಳುಳ್ಳ ಉದ್ಯಮವಾಗಿದೆ. ರಾಷ್ಟ್ರದ ಮೂಲೆ ಮೂಲೆಗಳಲ್ಲಿ ವಿಆರ್‌ಎಲ್ ವಾಹನಗಳು ಓಡಾಡುತ್ತಿವೆ. ಅವರು ಈ ಮಟ್ಟಕ್ಕೆ ಬೆಳೆಯಲು ಅವರು ಅಳವಡಿಸಿಕೊಂಡಿರುವ ಕಾಯಕ ಸಿದ್ಧಾಂತವೇ ಕಾರಣ ಎಂದು ಅಭಿಮಾನಪಟ್ಟರು.

ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಗಮೇಶ ಪಾಟೀಲ ಹಾರ್ಮೋನಿಯಂ, ಪ್ರಕಾಶ ಪಾಟೀಲ ತಬಲಾ ಸಾಥ್ ನೀಡಿದರು.

ಪ್ರಮುಖರಾದ ಪ್ರಕಾಶ ಬೆಂಡಿಗೇರಿ, ಡಾ. ಸೋಮಶೇಖರ ಹುದ್ದಾರ, ಬಸವರಾಜ ಚನ್ನೋಜಿ, ನಿಂಗಪ್ಪ ಮಟ್ಟಿ, ಮಂಜುನಾಥ ನಾಯ್ಕರ, ಈರಣ್ಣ ಇಂಗಳಹಳ್ಳಿಮಠ, ಬಸವರಾಜ ಹೆಬ್ಬಳ್ಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net