

ಮಾನ್ವಿ: ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿ, ಮತ, ಪಂಥಗಳಿಗಾಗಿ ಕಿತ್ತಾಡುವುದನ್ನು ಬಿಟ್ಟು ಮಕ್ಕಳಲ್ಲಿ ಭಾವೈಕ್ಯ ಮನೋಭಾವ ಮೂಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಮಹಿಬೂಬ್ ಮದ್ಲಾಪುರ ಹೇಳಿದರು.
ನೀರಮಾನ್ವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ರಾಯಚೂರು ಭಾರತ ಸೇವಾದಳ ಹಮ್ಮಿಕೊಂಡಿದ್ದ ಸೇವಾದಳ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವಕರಲ್ಲಿ ಜಾತಿ, ಮತ ಬೀಜ ಬಿತ್ತಿ ಅವರ ಜೀವನ ಹಾಳು ಮಾಡುವುದು ಸರಿಯಲ್ಲ ಎಂದರು.
ದೇಶದ ಸ್ವಾತಂತ್ರೃಕ್ಕಾಗಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರಬೋಸ್, ಭಗತ್‌ಸಿಂಗ್ ಸೇರಿ ಅನೇಕ ಮಹನೀಯರು ಹೋರಾಡಿ ಜೀವನ ಅರ್ಪಿಸಿದರು. ಅವರ ಜೀನಾದರ್ಶ ಅಳವಡಿಸಿಕೊಂಡು ಯುವಕರು ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಭಾಷಣ, ರಂಗೋಲಿ, ಚಿತ್ರಕಲೆ, ದೇಶಭಕ್ತಿ ಗೀತೆಗಳ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಭಾಗದ ಸಂಘಟಕ ವಿದ್ಯಾಸಾಗರ್ ಚಿಣಮಗೇರಿ, ಶಾಲೆಯ ಮುಖ್ಯಶಿಕ್ಷಕ ಮಕ್ಬುಲ್ ಅಹ್ಮದ್, ಶಿಕ್ಷಕರಾದ ಲಕ್ಷ್ಮೀದೇವಿ, ಪ್ರಕಾಶ, ಶಾರದಾ, ದೀಪಾ, ಲಕ್ಷ್ಮೀದೇವಿ, ವಿಜಯಲಕ್ಷ್ಮೀ ಇತರರಿದ್ದರು.