ಮಕ್ಕಳಲ್ಲಿ ರಂಗಭೂಮಿ ಅಭಿರುಚಿ ಮೂಡಿಸಿ

Instill a love of theater in children
Published on

ಹಾನಗಲ್ಲ: ಕಲಾ ಪೋಷಣೆಯಲ್ಲಿ ಯುವ ಜನಾಂಗದ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳಲ್ಲಿ ರಂಗಭೂಮಿಯ ಅಭಿರುಚಿ ಮೂಡಿಸಬೇಕು. ಇದರಿಂದ ಅನೇಕ ಕೆಡಕುಗಳನ್ನು ತಪ್ಪಿಸಲು ಸಾಧ್ಯ. ರಂಗಭೂಮಿಯ ಸಂದೇಶಗಳ ಮೂಲಕ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಶಿಗ್ಗಾಂವಿಯ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ರಂಗಾಯಣ ಧಾರವಾಡ, ಶೇಷಗಿರಿಯ ಗಜಾನನ ಯುವಕ ಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ಖ್ಯಾತ ನಾಟಕಕಾರ ಜಿ.ಬಿ. ಜೋಷಿ ಅವರ ಸತ್ತವರ ನೆರಳು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಡಿನ ಎಲ್ಲ ಗ್ರಾಮಗಳಿಗೆ ರಂಗಗ್ರಾಮ ಶೇಷಗಿರಿ ಮಾದರಿಯಾಗಿದ್ದು, ಕಲೆ ಸಂಸ್ಕೃತಿಯ ಉಳಿವಿಗಾಗಿ ಇಲ್ಲಿನ ಯುವಕರ ಶ್ರಮ ಸಾರ್ಥಕವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಗ್ರಾಮವನ್ನು ರಂಗಭೂಮಿ ತರಬೇತುದಾರ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಹಾವೇರಿಯ ಹಂಚಿನಮನಿ ಆರ್ಟ ಗ್ಯಾಲರಿಯ ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಶೇಷಗಿರಿ ಒಂದು ಸಾಂಸ್ಕೃತಿಕ ಆಂದೋಲನವನ್ನೇ ಯಶಸ್ವಿ ಮಾಡಿದೆ. ನಾಟಕ ಕಲೆ ಬೆಳೆಸುವ ನಿಟ್ಟಿನಲ್ಲಿ ಶೇಷಗಿರಿಯ ಕೊಡುಗೆ ಅಪಾರವಾದುದು. ರಂಗಭೂಮಿಯಲ್ಲಿ ತೊಡಗಿಕೊಂಡರೆ ಕಲೆಯಲ್ಲಿ ಹೊಸತನ್ನು ಕಂಡುಕೊಳ್ಳಬಹುದು. ಕಲಾವಿದ ಪ್ರಬುದ್ಧನಾಗಲು ರಂಗಭೂಮಿ ಸಹಕಾರಿಯಾಗುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಮಾತನಾಡಿ, ಶೇಷಗಿರಿ ಹಲವು ದಶಕಗಳ ಪ್ರಾಮಾಣಿಕ ಪ್ರಯತ್ನದಿಂದಾಗಿ ಇಷ್ಟು ದೊಡ್ಡದಾಗಿ ರಂಗಭೂಮಿ ಕ್ಷೇತ್ರದಲ್ಲಿ ಬೆಳೆದು ನಿಂತಿದೆ. ರಂಗಭೂಮಿಯಂತಹ ಸಾಂಸ್ಕೃತಿಕ ಮಾಧ್ಯಮ ಪ್ರತಿ ಊರು ಕೇರಿಯಲ್ಲಿ ಬೆಳೆಯುವಂತಾದರೆ, ಸಾಂಸ್ಕೃತಿಕ ಭಾರತದ ಕನಸು ನನಸಾಗಬಲ್ಲದು ಎಂದರು.

ಶಂಕ್ರಪ್ಪ ಗುರಪ್ಪನವರ ಅಧ್ಯಕ್ಷತೆ ವಹಿಸಿದ್ದರು. ತಿಳವಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಗ್ರಾಪಂ ಸದಸ್ಯೆ ಸುಶೀಲಾ ತಳವಾರ, ಸಿದ್ದಪ್ಪ ಅಂಬಿಗೇರ, ವಿರೂಪಾಕ್ಷ ಹಾವನೂರ, ಪ್ರಭು ಗುರಪ್ಪನವರ ಉಪಸ್ಥಿತರಿದ್ದರು. ನಾಗರಾಜ ಧಾರೇಶ್ವರ ಸ್ವಾಗತಿಸಿದರು. ಎಸ್.ಎಲ್. ಸಂತೋಷ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net