

ಬಾಗಲಕೋಟೆ: ಸಾಮಾಜಿಕ ಬದಲಾವಣೆ, ದೇಶಭಕ್ತಿ, ಅಭಿವೃದ್ಧಿ ಬಗ್ಗೆ ನೂರೆಂಟು ಚರ್ಚೆ ನಿತ್ಯವು ನಡೆಯುತ್ತವೆ. ಮುಂದಾಳತ್ವ ವಹಿಸಿ ಬದಲಾವಣೆ ತರುವುದು ಅಪರೂಪ. ಇಲ್ಲೊಂದು ಪುಟ್ಟ ಗ್ರಾಮವಿದೆ. ತಮ್ಮದೇ ತಂಡ ಕಟ್ಟಿಕೊಂಡು ಸೇವೆಯನ್ನೆ ಅಸ್ತ್ರವಾಗಿಸಿಕೊಂಡು ಹೆಜ್ಜೆ ಇಟ್ಟಿರುವ ಪರಿಣಾಮ ಗ್ರಾಮದ ಚಿತ್ರಣವೇ ಬದಲಾಗಿದೆ.
ಹೌದು, ಇದು ಬೀಳಗಿ ತಾಲೂಕಿನ ಲಿಂಗಾಪುರ ಎಸ್.ಕೆ. ಗ್ರಾಮದ ಮಾದರಿ ಕಾರ್ಯ ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಗ್ರಾಮದ ಮಾಜಿ ಸೈನಿಕರು, ಹಾಲಿ ಸೈನಿಕರು, ಪೊಲೀಸರ ನೇತೃತ್ವದಲ್ಲಿ ಏಮ್ಸ್ ಆಫ್ ಲಿಂಗಾಪುರ ಎಸ್.ಕೆ. ತಂಡ ರಚಿಸಲಾಗಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ, ಹೆಸ್ಕಾಂ, ಅರಣ್ಯ ಇಲಾಖೆ, ಖಾಸಗಿ ಕಂಪನಿ ನೌಕರರು ಸೇರಿದಂತೆ ಗ್ರಾಮದ ಹಾಲಿ, ನಿವೃತ್ತ ನೌಕರರು ಕೈಜೋಡಿಸಿದ್ದಾರೆ. ಜಾತಿ, ಮತ ಪಂಥ ಮೀರಿ ಬೆಂಬಲ ವ್ಯಕ್ತವಾಗಿದ್ದು, ಗ್ರಾಮದಲ್ಲಿ ಹೊಸ ಆಶಾಕಿರಣವೇ ಮೂಡಿದೆ.
1200 ಜನ ಸಂಖ್ಯೆ ಇರುವ ಲಿಂಗಾಪುರ ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಸೈನಿಕರು ಬದಲಾವಣೆ ತರಲು ಬಯಸಿದರು. 2018 ರಲ್ಲಿ ಮೊದಲ ಹಂತದಲ್ಲಿ ಹಿರಿಯರು, ಕಿರಿಯರ ನಡುವೆ ಇದ್ದ ವೈಮನಸ್ಸು ಕಡಿಮೆ ಮಾಡಲು ಒಗ್ಗಟ್ಟು ಮೂಡಿಸಲು ಸೈನಿಕರಿಗೆ ಸಲಾಂ ಎನ್ನುವ ವಿನೂತನ ಕಾರ್ಯಕ್ರಮವನ್ನು ಅಭಿಯಾನ ರೂಪದಲ್ಲಿ ರೂಪಿಸಿದರು. ತಮ್ಮ ಉದ್ದೇಶ, ಆಶಯ ವ್ಯಕ್ತಪಡಿಸಿ ಸಹಕಾರ ಕೋರಿದರು. ಇದರಿಂದ ವೈಯಕ್ತಿಕ ವೈಮನಸ್ಸು ಬದಿಗಿಟ್ಟು ಒಗ್ಗಟ್ಟಾದರು. ಏಮ್ಸ್ ಆಫ್ ಲಿಂಗಾಪುರ ಎಸ್.ಕೆ. ಎಂಬ ಹೆಸರಲ್ಲಿ ತಂಡ ಹುಟ್ಟು ಹಾಕಿದರು. ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ತಮ್ಮ ಹಲವು ಕನಸುಗಳನ್ನು ಗ್ರಾಮಸ್ಥರ ಎದುರು ಹರವಿದರು.
ಗ್ರಾಮದಲ್ಲಿ ದೇಶಭಕ್ತಿ ಮೂಡಿಸುವ ಪ್ರಯತ್ನ ಮಾಡಿದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಳಿಕ ಗ್ರಾಮದಲ್ಲಿ ಜಾತಿ, ಮತ, ಪಂಥ, ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರ ಮಕ್ಕಳು ಸರ್ಕಾರಿ, ಖಾಸಗಿ ನೌಕರಿ ಸೇರಬೇಕು ಎನ್ನುವ ಆಶಯದೊಂದಿಗೆ ರಜೆ ಸಂದರ್ಭದಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ವೈದ್ಯಕೀಯ, ಇಂಜಿನಿಯರಿಂಗ್, ಪಿಎಚ್‌ಡಿಯಲ್ಲಿ ಉತ್ತಮ ಅಂಕ ಪಡೆದವರಿಗೆ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಆಗಸ್ಟ್ 15, ಜನವರಿ 26 ರಂದು ವಿಜೃಂಭಣೆಯಿಂದ ರಾಷ್ಟ್ರೀಯ ಹಬ್ಬ ಆಚರಿಸುತ್ತಾರೆ. ಅಲ್ಲದೆ ಕೋವಿಡ್, ಡೆಂೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಉಲ್ಬಣಿಸಿದಾಗ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾರೆ. ಸಂಕಷ್ಟದಲ್ಲಿರುವ ಕುಟುಂಬದ ಆರೋಗ್ಯದ ರಕ್ಷಣೆಗೆ ತಾವೇ ಮುಂದಾಳತ್ವ ವಹಿಸುತ್ತಾರೆ. ಗ್ರಾಮದ ಹಾಲಿ, ನಿವೃತ್ತ ನೌಕರರು ಇದಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.
ಗ್ರಾಮವು ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಇಡೀ ಇಂಡಿಯಾದಲ್ಲಿ ಗ್ರಾಮದ ಹೆಸರು ಮಿಂಚಬೇಕು. ನಮ್ಮ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಬೇಕು. ಗ್ರಾಮವು ಆರೋಗ್ಯಯುತ, ಸದೃಢ ಸಮಾಜವಾಗಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ.
ಇದಕ್ಕೆಲ್ಲ ಹಣ ಹೇಗೆ ಹೊಂದಿಸುತ್ತಾರೆ? ಈ ತಂಡವು ಮಾಡುವ ಯಾವುದೇ ಕಾರ್ಯದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಸರ್ಕಾರದ ಅನುದಾನ ಪಡೆದುಕೊಳ್ಳುವುದಿಲ್ಲ. ತಾವೇ ಹಣ ಸಂಗ್ರಹಿಸಿ ಪ್ರತಿಯೊಂದು ಕಾರ್ಯಕ್ರಮ, ಅಭಿಯಾನ ಏರ್ಪಡಿಸುತ್ತಾರೆ. ಅಗತ್ಯ ಖರ್ಚುಗಳ ಲೆಕ್ಕವನ್ನು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಹಾಕುತ್ತಾರೆ. ತಮ್ಮ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವಾಗ ಕೂಡ ಪರಿಶೀಲನೆ ಮಾಡುತ್ತಾರೆ. ಸಮಾಜ ಹಾಗೂ ದೇಶದ ಬಗ್ಗೆ ಕಾಳಜಿ ಇರುವ ಗಣ್ಯರನ್ನು ಮಾತ್ರ ಆಹ್ವಾನಿಸುತ್ತಾರೆ. ಹೀಗೆ ತಮ್ಮದೇಯಾದ ಗುರಿ ಇಟ್ಟುಕೊಂಡು ಮುನ್ನಡೆಯುತ್ತಾರೆ. ಪುಟ್ಟ ಗ್ರಾಮದಲ್ಲಿ ದೊಡ್ಡ ಕಾಯಕ ಉಳಿದ ಗ್ರಾಮಗಳಿಗೆ ಮಾದರಿಯಾಗಿದೆ.
ನಮ್ಮ ಗ್ರಾಮವು ಆದರ್ಶ ಗ್ರಾಮವಾಗಬೇಕು. ದೇಶಭಕ್ತಿಯ ತವರೂರು ಆಗಬೇಕು ಎನ್ನುವ ಆಶಯದೊಂದಿಗೆ 2018 ರಲ್ಲಿ ಏಮ್ಸ್ ಆಫ್ ಲಿಂಗಾಪುರ ತಂಡ ರಚಿಸಿದೆವು. ಅನೇಕ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಗ್ರಾಮದಲ್ಲಿ ಬಹಳಷ್ಟು ಬದಲಾವಣೆ ಬಂದಿದೆ. ನಮ್ಮ ಗ್ರಾಮದವರೇ ಆದ ವಿವಿಧ ಇಲಾಖೆಯಲ್ಲಿ ನೌಕರರು, ನಿವೃತ್ತ ನೌಕರರು ಕೈ ಜೋಡಿಸಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪಿಎಚ್‌ಡಿ ಸೇರಿ ವಿವಿಧ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಸನ್ಮಾನಿಸುತ್ತೇವೆ. ತಂಡವನ್ನು ನೋಂದಣಿ ಮಾಡಿಲ್ಲ. ಪಾರದರ್ಶಕವಾಗಿ ಜಮಾ-ವೆಚ್ಚ ನಿರ್ವಹಿಸಲಾಗುತ್ತದೆ. ನಮಗೆ ಅಧಿಕಾರ, ಹಣ ಬೇಕಿಲ್ಲ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ, ಪ್ರಗತಿ, ಬದಲಾವಣೆ ಮುಖ್ಯ. ನಮ್ಮ ಪ್ರಯತ್ನಕ್ಕೆ ಗ್ರಾಮಸ್ಥರು ಕೈಜೋಡಿಸಿದ್ದು ಶ್ಲಾಘನೀಯ. ಪ್ರಚಾರಕ್ಕಾಗಿ ಮಾಡುತ್ತಿಲ್ಲ. ರಾಮಪ್ಪ ಆಲಕನೂರ ಮಾಜಿ ಸೈನಿಕ, ಲಿಂಗಾಪುರ ಎಸ್.ಕೆ. ಏಮ್ಸ್ ತಂಡ ಸದಸ್ಯ