

ಶಿವಮೊಗ್ಗ: ಚುನಾವಣೆಯಲ್ಲಿ ಅಭ್ಯರ್ಥಿ ಸೋಲು ಆಗುತ್ತದೆ. ಕೆಲವೊಮ್ಮೆ ಮತದಾರರೂ ಸೋಲುತ್ತಾರೆ. ಈ ಬಾರಿ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾನು ಸಮರ್ಥನಲ್ಲವೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದ್ದು, ಸೋಲನ್ನು ಒಪ್ಪಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಹೇಳಿದರು.
ಚುನಾವಣೆಗಳಲ್ಲಿ ಪಕ್ಷ, ಅಭ್ಯರ್ಥಿ ಮತ್ತು ಮತದಾರರ ಸೋಲು ಕೂಡ ಆಗುತ್ತದೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷ ಸೋತಿಲ್ಲ. ನಾನಂತೂ ಸೋತಿದ್ದೇನೆ. ಆದರೆ ಮತದಾರರೂ ಸೋತಿದ್ದಾರೆ ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ನನ್ನಿಂದ ಆಗುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ನೈಋತ್ಯ ಪದವೀಧರರ ಚುನಾವಣೆ ಈ ಬಾರಿ ವಿಶೇಷವಾಗಿತ್ತು. ಗೆಲುವಿನಲ್ಲೂ ದಾಖಲೆ ಬರೆದಿದೆ. ಇಲ್ಲಿ ಮತಗಳು ಮಾತ್ರವಲ್ಲ, ಸರ್ವ ಚಟುವಟಿಕೆಗಳ ಮೂಲಕ ಚುನಾವಣೆ ದಾಖಲೆ ಆಗಿದೆ. ಹಣ, ಹೆಂಡ, ಜಾತಿ, ಒಳಜಾತಿ ಅನಿಷ್ಠ ಪದ್ಧತಿಗಳಿಗೆ ಸಾಕ್ಷಿಯಾಗಿದೆ. ವಿದ್ಯಾವಂತರ ಕ್ಷೇತ್ರ ಅತ್ಯಂತ ಮಲಿನವಾಗಿದೆ ಎಂದರು.
ಇದು ನನ್ನ 10ನೇ ಸಾರ್ವತ್ರಿಕ ಚುನಾವಣೆ. 30 ವರ್ಷದ ರಾಜಕೀಯ ಜೀವನದಲ್ಲಿ ನಾನೆಂದೂ ವಾಮಮಾರ್ಗ ಅನುಸರಿಸಲಿಲ್ಲ. ನಾನು ಯಾವುದನ್ನು ಮಾಡಲಿಲ್ಲವೋ ಅದನ್ನು ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಮೊದಲ ಪ್ರಯತ್ನದಲ್ಲೇ ಮಾಡಿ ತೋರಿಸಿದ್ದಾರೆ. ಇದು ಪದವೀಧರರಿಗೆ ನೈತಿಕ ಪ್ರಶ್ನೆಯಾಗಿದೆ. ಹಣ, ಪಾರ್ಟಿಗಳಿಗೆ ಮಾರುಹೋಗಿರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ಪದವೀಧರರ ಪರವಾಗಿ ವಿಧಾನ ಪರಿಷತ್‌ನಲ್ಲಿ ಗಟ್ಟಿಯಾಗಿ ಧ್ವನಿ ಎತ್ತಿದ್ದೇನೆ. ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿ ವಿಚಾರದಲ್ಲಿ ಹೋರಾಟ ಮಾಡಿದ್ದೇನೆ. ಶಾಸಕರಿಗೆ ಕೊಡುತ್ತಿರುವ ಪಿಂಚಣಿ ರದ್ದು ಮಾಡುವ ಮಟ್ಟಕ್ಕೆ ಹೋರಾಟ ಮಾಡಿದ್ದೆ. ಆದರೆ ಕೊನೆ 3-4 ದಿನಗಳಲ್ಲಿ ಮತದಾರರು ಬದಲಾಗಿದ್ದಾರೆ. ನಾಲ್ಕಾರು ಸಾವಿರಕ್ಕೆ ತಮ್ಮ ನಿಲುವು ಬದಲಿಸಿದ್ದಾರೆ ಎಂದು ಕಿಡಿಕಾರಿದರು.