

ಹುಬ್ಬಳ್ಳಿ : ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಪ್ರಯತ್ನಿಸದೇ, ಅವರನ್ನು ಉದ್ಯಮಿಗಳನ್ನಾಗಿ ರೂಪಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ರೋಜಗಾರ ಮೇಳದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡಿರುವ ಯುವಕ-ಯುವತಿಯರು ಸಾರ್ವಜನಿಕರೊಂದಿಗೆ ಉತ್ತಮ ನಡವಳಿಕೆಯಿಂದ ವರ್ತಿಸಬೇಕು. ಭ್ರಷ್ಟಾಚಾರ ಮುಕ್ತವಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸಬೇಕು ಎಂದು ತಿಳಿಸಿದರು.
ಇಂದು ಇಡೀ ದೇಶದ 40 ಕೇಂದ್ರಗಳಲ್ಲಿ ಯುವ ಜನರಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ. ರಾಜ್ಯದಲ್ಲಿಯೂ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಕೇಂದ್ರಗಳಲ್ಲಿ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಳೆದ 6 ವರ್ಷಗಳಲ್ಲಿ ದೇಶದ 7.22 ಲಕ್ಷ ಜನರಿಗೆ ಶಾಶ್ವತ ಉದ್ಯೋಗ ಒದಗಿಸಿದೆ. ಪರೀಕ್ಷೆ ನೇಮಕಾತಿ ಗೊಂದಲಗಳನ್ನು ನಿವಾರಿಸಿ, ಸರಳೀಕರಣಗೊಳಿಸಲಾಗಿದೆ. 2019 ರಿಂದ 2024ರ ಅವಧಿಯಲ್ಲಿ 17 ಕೋಟಿ ಜನರು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಂಡಿರುವುದಕ್ಕೆ ಇಪಿಎಫ್ಒ ನೋಂದಣಿಯೇ ಸಾಕ್ಷಿ ಎಂದರು.
ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕ ಶಕ್ತಿ ದ್ವಿಗುಣಗೊಂಡಿದೆ. 2028-29ನೇ ಸಾಲಿಗೆ ಭಾರತ ಜಾಗತಿಕವಾಗಿ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಭಾರತದಲ್ಲಿ ಉದ್ಯೋಗಿಗಳಿಗೆ ಕೊಡುವ ಸೌಲಭ್ಯಗಳು ಅತ್ಯುತ್ತಮವಾಗಿವೆ. ಕೋವಿಡ್ ಹೊರತುಪಡಿಸಿ ಇನ್ನುಳಿದ ಅವಧಿಯ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ವಂದೇ ಭಾರತ್ ರೈಲಿನ ಲೋಕೋಗಳು, ರಕ್ಷಣಾ ಸಾಮಗ್ರಿಗಳು ಸೇರಿದಂತೆ ಪ್ರಮುಖ ವಸ್ತುಗಳು ದೇಶದಲ್ಲಿಯೇ ಉತ್ಪಾದನೆಗೊಳ್ಳುತ್ತಿವೆ. ಮೋಬೈಲ್ ಫೋನ್ ಉತ್ಪಾದನೆಯಲ್ಲಿಯೂ ಉನ್ನತ ಸ್ಥಾನದಲ್ಲಿದ್ದೇವೆ. ಬುಲೆಟ್ಪ್ರೂಪ್ ಜಾಕೆಟ್ಗಳು ಸಹ ಭಾರತದಲ್ಲೇ ಉತ್ಪಾದನೆಗೊಳ್ಳುತ್ತಿವೆ. ವಿದ್ಯುತ್ ಉತ್ಪಾದನೆಯೂ ದ್ವಿಗುಣಗೊಂಡಿದೆ ಎಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಉದ್ಯೋಗ ನೇಮಕಾತಿಯಲ್ಲಿ ಯಾವುದೇ ವಸೀಲಿಬಾಜಿ ಇಲ್ಲದೇ ನೇರ ನೇಮಕಾತಿ ನಡೆಯುತ್ತಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ 25 ಜನರಿಗೆ ನೇಮಕಾತಿ ಪತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದೇ ಸಂದರ್ಭದಲ್ಲಿ ವಿತರಿಸಿದರು.
ಅಂಚೆ ಇಲಾಖೆ ನಿರ್ದೇಶಕಿ ವಿ. ತಾರಾ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಇದ್ದರು.