

ಗಜೇಂದ್ರಗಡ: ಪಟ್ಟಣದ ಡಬಲ್ ರಸ್ತೆಯಲ್ಲಿನ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಎಲ್ಲ ತರಕಾರಿ, ಹಣ್ಣು, ಹೂವಿನ ವ್ಯಾಪಾರಿಗಳನ್ನು ಸೋಮವಾರ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹಾಗೂ ಪಿಎಸ್ಐ ಸೋಮನಗೌಡ ಗೌಡ್ರ ನೇತೃತ್ವದಲ್ಲಿ ಎಪಿಎಂಸಿ ಎದುರಿನ ಬಯಲು ಜಾಗಕ್ಕೆ ಸ್ಥಳಾಂತರಿಸಲಾಯಿತು.
ಡಬಲ್ ರಸ್ತೆಯ ಎರಡು ಬದಿ ಪುಟಪಾತ್ ವ್ಯಾಪಾರಿಗಳು ವ್ಯಾಪಾರ-ವಹಿವಾಟು ನಡೆಸುತ್ತಿ ರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು ಇದನ್ನು ತಪ್ಪಿಸುವಂತೆ ಹಲವಾರು ಸಂಘಟನೆಗಳು, ಸಾರ್ವಜನಿಕರು ಈ ಕುರಿತು ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಕಳೆದ ವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ಸಲುವಾಗಿ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವ್ಯಾಪಾರಸ್ಥರಿಗೆ ಬೇರೆಡೆ ಸ್ಥಳ ಹುಡುಕಿ ಅಲ್ಲಿಯೇ ವ್ಯಾಪಾರ ನಡೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದರು. ಹೀಗಾಗಿ ಪುರಸಭೆಯವರು ಎಪಿಎಂಸಿಯ ಬಯಲು ಜಾಗದಲ್ಲಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದಕ್ಕೆ ಹಲವು ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆಗಳು ನಡೆದವು.
ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ವಾಹನಗಳ ಸಂಚಾರವು ಹೆಚ್ಚಾಗ ತೊಡಗಿದೆ. ಹೀಗಾಗಿ ಸಂಚಾರದ ಹಿತದೃಷ್ಟಿಯಿಂದ ತರಕಾರಿ ಮಾರುಕಟ್ಟೆಯನ್ನು ಬಯಲು ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಪಟ್ಟಣದ ಯಾವುದೇ ರಸ್ತೆಯಲ್ಲಾಗಲಿ, ವಾಹನಗಳು ಹಾಗೂ ಜನರ ಸಂಚಾರ ಮಾಡುವ ಸ್ಥಳಗಳಲ್ಲಿ ವ್ಯಾಪಾರ ಮಾಡಬಾರದು. ಎಲ್ಲ ಬೀದಿ ಬದಿ ವ್ಯಾಪಾರಸ್ಥರು ಬಯಲು ಜಾಗದಲ್ಲಿಯೇ ಎಲ್ಲ ದಿನಗಳಲ್ಲಿ ವ್ಯಾಪಾರ ನಡೆಸಬೇಕು. ವಾರದ ಸಂತೆಯನ್ನು ಸಹ ಅಲ್ಲಿಯೇ ನಡೆಸಬೇಕು. ಸಂಚಾರಕ್ಕೆ ತೊಂದರೆ ಕೊಡುವ ವ್ಯಾಪಾರಿಗಳಿಗೆ ಈಗಾಗಲೇ ಸೂಚನೆ ನೀಡಿ ಬೇರೆಡೆ ಸ್ಥಳಾಂತರಿಸಿ ಎಂದು ಅವರ ಗಮನಕ್ಕೆ ತರಲಾಗಿದೆ. ವ್ಯಾಪಾರಿಗಳು ಸಹಕರಿಸಬೇಕು ಎಂದು ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಕೋರಿದ್ದಾರೆ.