

ಚಿಕ್ಕಮಗಳೂರು: ಛಲದಿಂದ ಕಠಿಣ ಶ್ರಮಪಟ್ಟರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್‌ನಿಂದ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮತ್ತು ಇತರೆ ನಾಗರಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಲಾಗಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಒಳ್ಳೆ ಶಿಕ್ಷಣ ಸಿಕ್ಕ ನಂತರ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದರಿಂದ ದಿಢೀರನೆ ಉತ್ತಮ ಸ್ಥಾನ ಮಾನ ಸಿಗುವ ಅವಕಾಶಗಳಿವೆ. ನಮ್ಮ ಹಿನ್ನೆಲೆ ಏನು? ನಮ್ಮ ಜಾತಿ ಯಾವುದು? ನಮ್ಮ ಬಳಿ ಹಣ ಇದೆಯೋ ಇಲ್ಲವೋ ಇದೆಲ್ಲವೂ ವಿಷಯವೇ ಆಗುವುದಿಲ್ಲ ಎಂದರು.
ಸಿನಿಮಾ, ಸೀರಿಯಲ್‌ಗಳ ರೀತಿ ಕೇವಲ ಶ್ರೀಮಂತರು ಮಾತ್ರ ಐಎಎಸ್ ಪರೀಕ್ಷೆ ಬರೆಯಲು ಬರುವುದಿಲ್ಲ. ಅಲ್ಲಿ ರಾಜಕಾರಣಿಗಳು, ಬಡ ರೈತರ ಮಕ್ಕಳು, ಎಲ್ಲ ರೀತಿ ಜಾತಿಯವರು ಇರುತ್ತಾರೆ. ಅಲ್ಲಿಗೆ ಹೋದರೆ ಒಂದೊಳ್ಳೆ ಜಾಗಕ್ಕೆ ಬಂದಿದ್ದೇವೆ ಎನ್ನುವ ಸಮಾಧಾನ ಸಿಗುತ್ತದೆ ಎಂದು ಹೇಳಿದರು.
ಎಐಟಿ ಕಾಲೇಜು ಪ್ರಾಚಾರ್ಯ ಸಿ.ಟಿ.ಜಯದೇವ್ ಮಾತನಾಡಿ, ನಾಗರಿಕ ಸೇವಾ ಹುದ್ದೆಗಳಿಗೆ ಹೋಗಬೇಕೆಂದು ಬಯಸುವವರಿಗೆ ಕೃಷಿಕ್ ಸರ್ವೋದಯ ಫೌಂಡೇಶನ್‌ನ ತರಬೇತಿ ಉತ್ತಮ ಅವಕಾಶವಾಗಿದೆ. ಇದರಲ್ಲಿ ದಕ್ಷ ಐಎಎಸ್ ಅಧಿಕಾರಿಗಳು ಇದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ತರಬೇತಿಯಿಂದ ಅತೀ ಹೆಚ್ಚು ಉಪಯೋಗವಾಗುತ್ತದೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಸಕ್ತಿ ಇರುವವರಿಗೆ ಮಾರ್ಗದರ್ಶನ ನೀಡುವ ಸೂಕ್ತ ಸಂಸ್ಥೆಗಳು, ತರಗತಿಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ ಮತ್ತು ಅವರ ತಂಡದಿಂದ ಕೃಷಿಕ್ ಫೌಂಡೇಶನ್ ಸ್ಥಾಪಿಸಲಾಯಿತು. ಇದಕ್ಕೆ ಎಐಟಿ ಕಾಲೇಜು ಸಂಪೂರ್ಣ ಸಹಕಾರ ನೀಡಿದ ಪರಿಣಾಮ ಇಂದು ಉತ್ತಮ ತರಬೇತಿ ನೀಡಲು ಸಾಧ್ಯವಾಗುತ್ತಿದೆ ಎಂದರು.
ಫೌಂಡೇಶನ್ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ, ಸದಸ್ಯರಾದ ಉಮೇಶ್ಚಂದ್ರ, ರವಿ, ಲಕ್ಷ್ಮಣಗೌಡ, ಸಂಪನ್ಮೂಲ ವ್ಯಕ್ತಿಗಳಾದ ಸುಬ್ರಹ್ಮಣ್ಯ, ಆಕಾಶ್ ಮತ್ತಿತರರಿದ್ದರು.