ಸಾಲಗಾರರೆನ್ನದೆ ‘ಹಣ ಬಳಕೆದಾರರು’ ಎನ್ನಿ..!

Instead of borrowers, they are called 'money users'..!
ವಿಜಯಪುರ ನಗರದ ಅಕ್ಕಮಹಾದೇವಿ ರಸ್ತೆಯ ಗಂಜ ಹತ್ತಿರ ದಿ ಆಲಮೆಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನಾಲ್ಕನೇ ಶಾಖೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು. ಜ್ಞಾನಯೋಗ ಆಶ್ರಮದ ಶ್ರೀ ಹರ್ಷಾನಂದ ಮಹಾಸ್ವಾಮೀಜಿ, ಬ್ಯಾಂಕ್‌ನ ಅಧ್ಯಕ್ಷ ಶಿವಕುಮಾರ ಗುಂದಗಿ, ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ಬಗಲಿ ಇತರರಿದ್ದರು.
Published on

ವಿಜಯಪುರ: ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವವನಿಗೆ ಸಾಲಗಾರ ಅನ್ನದೆ ಹಣ ಬಳಕೆದಾರರು ಎಂದು ಕರೆಯಬೇಕು. ಬ್ಯಾಂಕಿನಲ್ಲಿ ಹಣ ಇಡುವುದು ಎಷ್ಟು ಮುಖ್ಯವೋ ಸಾಲ ತೆಗೆದುಕೊಳ್ಳುವವರೂ ಅಷ್ಟೇ ಮುಖ್ಯ ಎಂದು ವಿಜಯಪುರದ ಜ್ಞಾನಯೋಗ ಆಶ್ರಮದ ಶ್ರೀ ಹರ್ಷಾನಂದ ಮಹಾಸ್ವಾಮೀಜಿ ಹೇಳಿದರು.

ಶನಿವಾರ ನಗರದ ಅಕ್ಕಮಹಾದೇವಿ ರಸ್ತೆ, ಗಂಜ್ ಹತ್ತಿರ, ದಿ ಆಲಮೆಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನಾಲ್ಕನೇ ಶಾಖೆ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ, ಬ್ಯಾಂಕ್ ತ್ರಿವೇಣಿ ಸಂಗಮ ಇದ್ದ ಹಾಗೆ ಹಣ ಇಡುವವರು ಒಬ್ಬರಾದರೆ, ಹಣ ಸಂರಕ್ಷಣೆ ಮಾಡುವ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಇನ್ನೊಂದು ಕಡೆ ಮತ್ತು ಹಣ ತೆಗೆದುಕೊಳ್ಳುವವ ಹೀಗೆ ಮೂರು ತರನಾಗಿ ನಡೆಯುತ್ತದೆ ಎಂದು ಹೇಳಿದರು.

ಸಿಂದಗಿ ಶಾಸಕ ಅಶೋಕ ಮನಗೂಳಿ ಶಾಖೆ ಉದ್ಘಾಟಿಸಿ ಮಾತನಾಡಿ, 24 ವರ್ಷಗಳ ಹಿಂದೆ 10,000 ರೂ. ದಿಂದ ಪ್ರಾರಂಭವಾದ ಬ್ಯಾಂಕ್ ಇಂದು 43 ಕೋಟಿ ರೂ.ಗಳ ವರೆಗೆ ವ್ಯವಹಾರ ನಡೆಯುತ್ತಿದೆ ಎಂದರೆ ಜನತೆ ಅದರ ಮೇಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದರು. ಬ್ಯಾಂಕ್ ಕಷ್ಟದಲ್ಲಿರುವವರನ್ನು ಗುರುತಿಸಿ ಸಹಾಯ ನೀಡಲಿ. ಬ್ಯಾಂಕ್ ಬೆಳೆದು ಅಭಿವೃದ್ಧಿಹೊಂದಲಿ ಎಂದರು.

ಬ್ಯಾಂಕ್‌ನ ಅಧ್ಯಕ್ಷ ಶಿವಕುಮಾರ ಗುಂದಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್‌ನ ಅಭಿವೃದ್ಧಿಗೆ ಗ್ರಾಹಕರ ಪ್ರಾಮಾಣಿಕತೆಯ ವ್ಯವಹಾರ ಹಾಗೂ ಸಿಬ್ಬಂದಿ, ನಿರ್ದೇಶಕ ಮಂಡಳಿಯ ಸಹಕಾರವೇ ಕಾರಣ ಎಂದರು.

ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ಬಗಲಿ, ಮಚೆರ್ಂಟ್ ಅಸೋಸಿಯೇಷನ್ ವಿಜಯಪುರದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಸಹಕಾರಿ ಸಂಘಗಳ ಉಪನಿಬಂಧಕ ಬಸವರಾಜ ಮಂಟೂರ ಮಾತನಾಡಿದರು.

ಸಹಕಾರಿ ಸಂಘಗಳ ಉಪ ವಿಭಾಗ ಇಂಡಿಯ ಸಹಾಯಕ ನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ಬಸವರಾಜ ಪಾಟೀಲ, ಮಲ್ಲು ಜೋಗುರ, ರಾಜೇಶ ದೇವಗೇರಿ, ಸಿದ್ರಾಮಪ್ಪ ನಾಗಠಾಣ (ನಿಡಗುಂದಿ), ಉಪಾಧ್ಯಕ್ಷರು, ಸರ್ವ ನಿರ್ದೇಶಕರು, ಆಲಮೇಲ ಹಾಗೂ ವಿಜಯಪುರದ ಗಣ್ಯ ವರ್ತಕರು, ಹಿರಿಯರು ಭಾಗವಹಿಸಿದ್ದರು. ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ ನಿರೂಪಿಸಿದರು. ಅಶೋಕ ಮಸಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net