

ಹುಬ್ಬಳ್ಳಿ: ಪಂಚ ಗ್ಯಾರಂಟಿಯಿಂದ ಕಂಗಾಲಾಗಿರುವ ಕಮಲ ಪಡೆ ನಾಯಕರು, ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿ ‘ಜನಾಕ್ರೋಶ’ ಯಾತ್ರೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಇಂಧನ ಮತ್ತು ಅನಿಲ ದರ ಏರಿಕೆ ಮಾಡಿದ್ದರಿಂದ ಈಗ ‘ಕ್ಷಮೆ ಯಾತ್ರೆ’ ಮಾಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಬಿಜೆಪಿಯವರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಕಡಿಮೆಯಾಗಿದೆ. ಇದರ ಲಾಭವನ್ನು ಭಾರತೀಯರಿಗೆ ಸಮರ್ಪಿಸಬೇಕು. ಅದು ಬಿಟ್ಟು ತೆರಿಗೆ ಹೊರಿಸಿ ಹೊರೆ ಮಾಡುತ್ತಿದೆ. ಜನರು ದಿನ ದೂಡುವುದೇ ಕಷ್ಟವಾಗಿದೆ. ಇದನ್ನು ಮರೆ ಮಾಚಲು ಬಿಜೆಪಿಯವರು ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸತ್ ಚುನಾವಣೆಗೆ ಮುನ್ನ ಬಿಜೆಪಿ ಧುರೀಣರು ಕಪ್ಪು ಹಣ ತರುತ್ತೇವೆ. ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಹಾಕುತ್ತೇವೆ. ರೈತರಿಗೆ ದುಪ್ಪಟ್ಟು ಆದಾಯ ಕೊಡುತ್ತೇವೆ ಎಂದೆಲ್ಲ ಹೇಳಿದರು. ಆದರೆ ಇದುವರೆಗೂ ಇವರಿಗೆ ಸಾಧ್ಯವಾಗಿಲ್ಲ. ಪ್ರಧಾನಿ ಮೋದಿ ಅವರಿಗೆ ಸುಳ್ಳಿನ ಪ್ರಶಸ್ತಿ ಕೊಡಬೇಕು ಎಂದು ತಿವಿದರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕೇಂದ್ರ ಕೊಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರೂ ಕಿವಿಗೊಡುತ್ತಿಲ್ಲ. ಮೇಕೆದಾಟು, ಮಹದಾಯಿ ಸೇರಿದಂತೆ ಇತರ ನದಿ ಯೋಜನೆಗಳಿಗೆ ಕೇಂದ್ರ ಅಸ್ತು ಎನ್ನುತ್ತಿಲ್ಲ ಎಂದು ದೂರಿದರು.
ಸಿದ್ದುಗೆ ಪ್ರೀತಿಯ ಕೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಳ್ಳುತ್ತಿಲ್ಲ. ಅಧಿಕಾರಿಗಳ ಮೇಲಿನ ಪ್ರೀತಿಯ ಕೋಪವಿದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ವ್ಯಾಖ್ಯಾನಿಸಿದರು.
ಅವರು ಎಲ್ಲರೊಂದಿಗೂ ಸಲುಗೆಯಿಂದ ಇರುತ್ತಾರೆ. ತಪ್ಪಾದಾಗ ಬೈದು ಬುದ್ಧಿ ಹೇಳುವ ಕೆಲಸ ಮನೆಯ ಯಜಮಾನನಿಗೆ ಇರುತ್ತದೆ. ಅಂತೆಯೇ ಅವರು ಪ್ರೀತಿಯ ಕೋಪ ವ್ಯಕ್ತಪಡಿಸಿದ್ದಾರೆ ಎಂದು ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಗೆ ಬೈದಿರುವ ಘಟನೆ ಕುರಿತು ವಿವರಿಸಿದರು.
ಹಾಲಿನ ದರ ಏರಿಕೆ ಮಾಡಲಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಾರೆ. ಬಂದ ಲಾಭಾಂಶ ರೈತರಿಗೆ ಹೋಗುತ್ತಿದೆ. ಇದನ್ನು ಬಿಜೆಪಿಯವರು ರೈತರಿಗೆ ಹೋಗುವುದಿಲ್ಲ ಎಂದು ಹೇಳಲಿ ನೋಡೋಣ ಎಂದರು.