ಠಿಕಾಣಿ ಹೂಡಿದ್ದವರ ವರ್ಗ: ಪೊಲೀಸರ ಬೇಸರ

Transfer 1
Published on

ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದೇ ಕಡೆ 5 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾನ್​ಸ್ಟೆಬಲ್ ಮತ್ತು ಹೆಡ್ ಕಾನ್​ಸ್ಟೆಬಲ್​ಗಳ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಹಠಾತ್ ವರ್ಗಾವಣೆಯಿಂದ ಪೊಲೀಸರಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಸರ್ಕಾರಿ ನೌಕರರಿಗೆ ಅನುಸರಿಸುವ ನಿಯಮದಂತೆ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವರ್ಗಾವಣೆ ಮಾಡಬೇಕು ಎಂದು ಹಲವು ಪೊಲೀಸರ ಅಭಿಪ್ರಾಯ. ವಿಜಯವಾಣಿ ಸಹಾಯವಾಣಿಗೆ ಅವರು ತೋಡಿಕೊಂಡ ಅಹವಾಲು ಆಧರಿಸಿದ ಸುದ್ದಿ ಇಲ್ಲಿ ನಿಮ್ಮೆದುರು...

ಬೆಂಗಳೂರು: ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಕಾನ್​ಸ್ಟೆಬಲ್ ಮತ್ತು ಹೆಡ್ ಕಾನ್​ಸ್ಟೆಬಲ್​ಗಳ ವರ್ಗಾವಣೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಯ ತರಾತುರಿ ವರ್ಗಾವಣೆ ಪ್ರಕ್ರಿಯೆ ವಿರುದ್ಧ ಪೊಲೀಸರು ಅಸಮಾಧಾನ ಹೊರಹಾಕಿದ್ದು, ಎಲ್ಲ ಸರ್ಕಾರಿ ನೌಕರರಂತೆ ನಮ್ಮನ್ನೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವರ್ಗಾ ವಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಅ.31ರ ಅಂತ್ಯಕ್ಕೆ ಒಂದೇ ಠಾಣೆಯಲ್ಲಿ 5 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವವವರನ್ನು ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಒಂದೇ ಕಡೆ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದರೆ ಭ್ರಷ್ಟಾಚಾರ, ಅಕ್ರಮ ವ್ಯವಹಾರಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಐದು ವರ್ಷ ಸೇವೆ ಸಲ್ಲಿಸಿದವರನ್ನು ಇಲಾಖೆ ವರ್ಗಾವಣೆ ಮಾಡುತ್ತದೆ.

ಜ್ಯೇಷ್ಠತಾ ಪಟ್ಟಿ ಆಧರಿಸಿ ಕೌನ್ಸೆಲಿಂಗ್ ಮೂಲಕ ಆಯಾ ಉಪವಿಭಾಗದ ವ್ಯಾಪ್ತಿಯಲ್ಲಿಯೇ ವರ್ಗಾವಣೆ ಮಾಡಲಾಗುತ್ತಿದೆ. ಈ ಹಿಂದೆ ಸೇವೆ ನಿರ್ವಹಿಸಿದ ಠಾಣೆ ಅಥವಾ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗೆ ಸ್ಥಳ ನಿಯುಕ್ತಿ ಅವಕಾಶವಿಲ್ಲ. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ವಿಡಿಯೋಗ್ರಫಿ ಮಾಡಲಾಗುತ್ತದೆ.

ಏನಾದರೂ ಲೋಪದೋಷ ಕಂಡುಬಂದರೆ ವಿಡಿಯೋವನ್ನು ಕಮಿಷನರ್ ಕಚೇರಿಗೆ ಒಪ್ಪಿಸಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಪ್ರಸ್ತುತ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಡಿ.5ರೊಳಗೆ ಪಟ್ಟಿ ಸಿದ್ಧಪಡಿಸಿ ಕಚೇರಿಗೆ ಕಳುಹಿಸಲು ಸೂಚಿಸಲಾಗಿದೆ.

ಪೊಲೀಸರ ಬೇಸರ ಏಕೆ?

ಹಠಾತ್ತನೆ ವರ್ಗಾವಣೆ ಮಾಡಿದರೆ ಮಕ್ಕಳ ಶಿಕ್ಷಣ, ಮನೆ, ಇನ್ನಿತರ ಕೌಟುಂಬಿಕ ಸೌಲಭ್ಯಗಳ ವ್ಯವಸ್ಥೆ ಕಷ್ಟವಾಗುತ್ತದೆ. ಮಕ್ಕಳ ಶಿಕ್ಷಣ ಮತ್ತು ಮನೆ ಬದಲಾವಣೆ ಅವಕಾಶ ಸಿಗುತ್ತದೆಂಬ ಕಾರಣಕ್ಕೆ ಸರ್ಕಾರಿ ನೌಕರರ ವರ್ಗಾವಣೆಯನ್ನು ಏಪ್ರಿಲ್ ಮತ್ತು ಮೇನಲ್ಲಿ ನಡೆಸಲಾಗುತ್ತದೆ. ಆದರೆ, ಪೊಲೀಸರಿಗೆ ಮಾತ್ರ ತರಾತುರಿಯಲ್ಲಿ ಡಿ.5ರ ಒಳಗೆ ನಡೆಯಬೇಕೆಂದು ಸೂಚನೆ ಕೊಟ್ಟಿದ್ದಾರೆ. ಅದರಲ್ಲಿಯೂ ಉಪವಿಭಾಗ ವ್ಯಾಪ್ತಿಯಲ್ಲಿಯೇ ಠಾಣೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದರಿಂದ ಪೊಲೀಸರಿಗೆ ಅನುಕೂಲಕ್ಕಿಂತ ಸಮಸ್ಯೆಗಳೇ ಹೆಚ್ಚು ಎಂದು ಕೆಲ ಪೊಲೀಸ್ ಸಿಬ್ಬಂದಿ ಅಳಲು ತೋಡಿ ಕೊಂಡಿದ್ದಾರೆ. ಏಪ್ರಿಲ್ ಮತ್ತು ಮೇನಲ್ಲೇ ವರ್ಗಾವಣೆ ಮಾಡಿದರೆ ಅನುಕೂಲ ಎಂದಿದ್ದಾರೆ.

ಅಂತರ ಜಿಲ್ಲಾ ವರ್ಗಾವಣೆ ಮಿತಿಯಲ್ಲಿ ಏರಿಕೆ

2019ರಲ್ಲಿ ನಿಯಮವನ್ನು ಭಾಗಶಃ ಮಾರ್ಪಾಡುಗೊಳಿಸಿ ತರಬೇತಿ ಅವಧಿ (1 ವರ್ಷ ಮೂಲ ಬುನಾದಿ ತರಬೇತಿ ಮತ್ತು 1 ವರ್ಷ ಪ್ರಾಯೋಗಿಕ ತರಬೇತಿ) ಪೂರೈಸಿದ ನಂತರ 5 ವರ್ಷ ಪೂರೈಸಿದವರಿಗೆ, ಅಂದರೆ ಒಟ್ಟು 7 ವರ್ಷ ಸೇವೆ ಪೂರೈಸಿದ ಅಧಿಕಾರಿ/ ಸಿಬ್ಬಂದಿಯನ್ನು ಮಾತ್ರ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸುವಂತೆಯೂ ಇತ್ತೀಚೆಗೆ ಆದೇಶಿಸಲಾಗಿದೆ. ಈ ಹಿಂದೆ ವರ್ಗಾವಣೆಗೆ ಕನಿಷ್ಠ ಮೂರು ವರ್ಷಗಳ ಸೇವಾವಧಿ ಮಿತಿ ನಿಗದಿಗೊಳಿಸಲಾಗಿತ್ತು. ನಂತರ ಐದು ವರ್ಷಗಳ ಅವಧಿಗೆ ಏರಿಸಿ ಸರ್ಕಾರ ಅದೇಶ ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net