ಕಿರುಸೇತುವೆಗಳಿಗೆ ರಕ್ಷಣಾ ಬೇಲಿ ಅಳವಡಿಸಿ, ನಗರಾಡಳಿತಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆ

small bridges visit
ಗಂಗಾವತಿ ದುರುಗಮ್ಮ ಹಳ್ಳದಲ್ಲಿ ಮಗು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಇತರರಿದ್ದರು.
Published on

ಗಂಗಾವತಿ: ನಗರದಲ್ಲಿ ಕೆಳಮಟ್ಟದಲ್ಲಿರುವ ಕಿರುಸೇತುವೆಗಳಿಗೆ ರಕ್ಷಣಾ ಬೇಲಿ ಹಾಕಬೇಕಿದ್ದು, ಹಳ್ಳದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರಿಕೆವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಸಲಹೆ ನೀಡಿದರು.

ನಗರದ ದುರುಗಮ್ಮ ಹಳ್ಳದಲ್ಲಿ ಮಗು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಬಾಲಕನ ಶೋಧಕ್ಕಾಗಿ ನಗರಸಭೆ ಮತ್ತು ತಾಲೂಕಾಡಳಿತಾಧಿಕಾರಿಗಳು ಅಗತ್ಯ ಕಾರ್ಯಾಚರಣೆ ನಡೆಸಿದ್ದು, ದುರುಗಮ್ಮನ ಹಳ್ಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸೂಕ್ಷ್ಮ ಪ್ರದೇಶದಲ್ಲಿ ಅಗತ್ಯ ರಕ್ಷಣಾ ಕಾಮಗಾರಿ ್ನ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ನಗರದ ಬಾಲಕನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ಮತ್ತು ಕಾರ್ಯಾಚರಣೆ ಕುರಿತು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾಹಿತಿ ನೀಡಿದರು.

ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ಪರಶುರಾಂಮಡ್ಡೇರ್, ಮುಷ್ತಾಕ್ ಅಹ್ಮದ್, ನೀಲಕಂಠಪ್ಪ ಕಟ್ಟಿಮನಿ, ಎಂ.ಡಿ.ಉಸ್ಮಾನ್, ಮುಖಂಡರಾದ ಮನೋಹರ ಹೇರೂರು, ಯಮನೂರಚೌಡ್ಕಿ, ನಾಗರಾಜ ಚಳಗೇರಿ ಇತರರಿದ್ದರು.

ನಗರಸಭೆ ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ಸಭೆ: ಇದಕ್ಕೂ ಮುನ್ನ ನಗರಸಭೆ ಕಚೇರಿಯಲ್ಲಿ ನಗರಸಭೆ ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ನಗರದ ಅಭಿವೃದ್ಧಿ ಮತ್ತು ಇತರ ಯೋಜನೆಗಳ ಕುರಿತು ಶಾಸಕ ಗಾಲಿ ಜನಾರ್ದನರೆಡ್ಡಿ ಚರ್ಚಿಸಿದರು. ಸ್ಥಾಯಿ ಸಮಿತಿ ಪುನರ್ ರಚನೆ ಬಗ್ಗೆಯೂ ಚರ್ಚೆಯಾಗಿದ್ದು, ಕಾಯ್ದೆ ಅನ್ವಯ ರಚಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net