

ಹೊಸದುರ್ಗ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಜಾಗದಲ್ಲಿ ಗುರುವಾರ ತಡರಾತ್ರಿ ಕಟ್ಟೆ ನಿರ್ಮಿಸಿ ಶ್ರೀಕೃಷ್ಣನ ಲೋಹದ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಘಟನೆ ನಡೆದಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಹಿರಿಯೂರು-ಹೊಸದುರ್ಗ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿರುವ ಜಾಗದಲ್ಲಿ ಯಾದವ ಸಮುದಾಯದ ಕೆಲ ಯುವಕರ ಈ ಕಾರ್ಯ ವಿವಾದಕ್ಕೆ ಕಾರಣವಾಗಿದೆ.
ಒಂದು ವಾರದ ಹಿಂದೆ ಇಲ್ಲಿ ಮೂರ್ತಿ ಸ್ಥಾಪನೆಗೆ ಅಡಿಪಾಯ ಹಾಕಲು ಗುಂಡಿ ತೆಗೆಯಲಾಗಿತ್ತು. ಇದನ್ನು ಗಮನಿಸಿದ ಸ್ಥಳಿಯ ಪುರಸಭಾ ಸದಸ್ಯೆ ಪುಷ್ಪಲತಾ ಗಂಗಾಧರ್, ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೈತೊಳೆದುಕೊಂಡಿದ್ದರು.
ಗುರುವಾರ ರಾತ್ರಿ ಟ್ರಾೃಕ್ಟ್‌ರ್‌ಗಳಲ್ಲಿ ಯುವಕರು ಕಾರ್ಯಾಚರಣೆ ಆರಂಭಿಸಿದ್ದಾರೆ. ರಾತ್ರಿ ಬೀಟ್ ಪೋಲಿಸರು ಕೆಲಸ ಪ್ರಶ್ನಿದ್ದಾರೆ. ಇದಕ್ಕೆ ಸ್ಥಳದಲ್ಲಿದ್ದ ಸಮಾಜದ ಮುಖಂಡರು ಪ್ರತಿಮೆ ಸ್ಥಾಪನೆಗೆ ಪುರಸಭೆ ಅನುಮತಿ ನೀಡಿದೆ. ನಾವು ಇಲ್ಲಿ ಕೇವಲ ಅಡಿಪಾಯ ಮಾತ್ರ ಹಾಕುತ್ತೇವೆ. ಮೂರ್ತಿ ಸ್ಥಾಪಿಸುವುದಿಲ್ಲ ಎಂದು ಹೇಳಿದ್ದಾರೆ.
ಮೂರ್ತಿ ಸ್ಥಾಪನೆ ಕಾಮಗಾರಿ ಶುಕ್ರವಾರ ಬೆಳಗ್ಗೆ ಪೂರ್ಣಗೊಂಡಿದ್ದು. ಕೃಷ್ಣನ ಮೂರ್ತಿ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಿ ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಪದ್ಮನಾಭ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ರಾಮಲಿಂಗಪ್ಪ, ರವೀಂದ್ರ ಇತರರಿದ್ದಾರೆ.
ಈ ಹಿಂದೆ ಪುರಸಭೆಯು ಇಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಯೋಜಿಸಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿ ಒಂದು ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿತ್ತು. ಆದರೆ, ಕಾಮಗಾರಿಯನ್ನು ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಕಾರಣ ಕಟ್ಟಡ ನಿರ್ಮಾಣ ಸಾಧ್ಯವಾಗಿರಲಿಲ್ಲ.
ಕೃಷ್ಣನ ವಿಗ್ರಹ ಸ್ಥಾಪಿಸಿರುವ ಜಾಗ ಪುರಸಭೆಗೆ ಸೇರಿಲ್ಲ. ಡಿಸಿ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಹಳೆಯ ಬಸ್ ನಿಲ್ದಾಣದಲ್ಲಿ ಬಸವೇಶ್ವರ ವೃತ್ತ ಸ್ಥಾಪಿಸಲು ಕೂಡ ಯಾವುದೇ ಅನುಮತಿ ಪಡೆದಿಲ್ಲ. ತಾಲೂಕು ಆಡಳಿತ ಈ ಕುರಿತು ತಿರ್ಮಾನ ತೆಗೆದುಕೊಳ್ಳಬೇಕು.ತಿಮ್ಮರಾಜು, ಪುರಸಭೆ ಮುಖ್ಯಾಧಿಕಾರಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಮೂರ್ತಿ ಸ್ಥಾಪನೆಗೆ ಅನುಮತಿ ಇಲ್ಲ. ಕೃಷ್ಣನ ಮೂರ್ತಿ ಸ್ಥಾಪಿಸಿರುವ ವಿಚಾರ ತಿಳಿದಿದೆ. ತಿರುಪತಿ ಪ್ರವಾಸದಲ್ಲಿರುವುದರಿಂದ ಶನಿವಾರ ಕ್ಷೇತ್ರಕ್ಕೆ ಮರಳಿದ ಬಳಿಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು. ಶ್ರೀಕೃಷ್ಣ ನಾವೆಲ್ಲರೂ ಆರಾಧಿಸುವ ದೈವ.ಬಿ.ಜಿ.ಗೋವಿಂದಪ್ಪ, ಶಾಸಕ ತಾಲೂಕಿನಲ್ಲಿ ಯಾದವ ಸಮುದಾಯ 25 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಸಮುದಾಯದ ಕೆಲವರು ರಾತ್ರಿ ವೇಳೆ ಮೂರ್ತಿ ಸ್ಥಾಪಿಸುವ ಮೂಲಕ ಎಲ್ಲರ ಮರ್ಯಾದೆ ಕಳೆದಿದ್ದಾರೆ. ಹಗಲು ವೇಳೆಯಲ್ಲಿಯೇ ಮೂರ್ತಿಯನ್ನು ಭವ್ಯವಾಗಿ ಪ್ರತಿಷ್ಠಾಪಿಸಬಹುದಾಗಿತ್ತು.ಗೂಳಿಹಟ್ಟಿ ಡಿ.ಶೇಖರ್, ಮಾಜಿ ಸಚಿವ