

ಮಂಡ್ಯ: ತಾಲೂಕಿನ ಕೆರಗೋಡು ಹೋಬಳಿ ಮಾರಗೌಡನಹಳ್ಳಿ ಗ್ರಾಮದಲ್ಲಿ ಜ.20 ರಿಂದ 22ರವರೆಗೆ ತಿರುಮಲ ದೇವರ ಸ್ಥಿರಬಿಂಬ ಪ್ರತಿಷ್ಠಾಪನಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಆನಂದ ಹೇಳಿದರು.
ಗ್ರಾಮದಲ್ಲಿರುವ ಸುಮಾರು 800 ವರ್ಷದ ಹಳೆಯದಾದ ತಿರುಮಲ ದೇವಸ್ಥಾನವನ್ನು ಪುನರ್‌ಜ್ಜೀವನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಬೇಬಿಮಠದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯದಲ್ಲಿ ಮೂರು ದಿನ ಧಾರ್ಮಿಕ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
20ರಂದು ಸಂಜೆ 4 ಗಂಟೆಗೆ ಗೋಮಾತೆ ಸಮೇತ ಗಂಗೆ ಪೂಜೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದಾರೆ. 21ರಂದು ಬೆಳಗ್ಗೆ 5.30ಕ್ಕೆ ವಿಮಾನಗೋಪುರ ಕಳಸ ಪ್ರತಿಷ್ಠಾಪನೆ ನಡೆಯಲಿದೆ. 22ರಂದು ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ದೇವಸ್ಥಾನದ ಶಿಲ್ಪಿ ರವಿ ಮುರುಡೇಶ್ವರ ಅವರನ್ನು ಅಭಿನಂದಿಸಲಾಗುವುದು. ಅಂತೆಯೇ ಮಧ್ಯಾಹ್ನ 1ಗಂಟೆಯಿಂದ ಅನ್ನದಾಸೋಹ ಇರಲಿದೆ ಎಂದು ಹೇಳಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ವರದರಾಜು, ವಕೀಲ ರಾಜು, ಸಮಿತಿಯ ಗೋಪಾಲಯ್ಯ, ಬಿ.ಶಿವಲಿಂಗಯ್ಯ, ಪಾಪಣ್ಣ, ಶಿವಲಿಂಗಯ್ಯ ಇದ್ದರು.